ಉಡುಪಿ: ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಪ್ರಾಂತ್ಯ 4 ಜಿಲ್ಲೆ 317 ‘ಸಿ’ಯ ಕಾನ್ಫೋರೆನ್ಸ್ ಕಮಿಟಿ ಅಂಡ್ ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ಇದರ ಆಶ್ರಯದಲ್ಲಿ ಫೆ. 22ರಂದು ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಪ್ರಾಂತೀಯ ಸಮ್ಮೇಳನ ‘ಸ್ವಾತಿಮುತ್ತು’ ಆಯೋಜಿಸಲಾಗಿದೆ ಎಂದು ಕಾನ್ಫೋರೆನ್ಸ್ ಕಮಿಟಿಯ ಮುಖ್ಯಸ್ಥ ಸತೀಶ್ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದ ಅಂಗವಾಗಿ ಹೊಲಿಗೆ ಯಂತ್ರಗಳ ವಿತರಣೆ, ಸೋಲಾರ್, ವಾಟರ್ ಪ್ಯೂರಿಫಾಯರ್, ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಸೇರಿದಂತೆ 1ಲಕ್ಷಕ್ಕೂ ಹೆಚ್ಚಿನ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದಲ್ಲಿ 700ಕ್ಕೂ ಅಧಿಕ ಲಯನ್ಸ್ ಬಂಧುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಲಯನ್ಸ್ ಪ್ರಾಂತ್ಯ 4 ಜಿಲ್ಲೆ 317 ‘ಸಿ’ಯ ಪ್ರಾಂತೀಯ ಅಧ್ಯಕ್ಷೆ ವಿದ್ಯಾಲತ ಯು. ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲ ಕುಂದರ್, ಉದ್ಯಮಿಗಳಾದ ಪುರುಷೋತ್ತಮ್ ಶೆಟ್ಟಿ, ಜಯರಾಜ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಕಮಿಟಿಯ ಕಾರ್ಯದರ್ಶಿ ಉಮೇಶ್ ನಾಯಕ್, ಪ್ರಾದೇಶಿಕ ಕಾರ್ಯದರ್ಶಿ ಶೇಖರ್ ಶೆಟ್ಟಿ, ಪ್ರಕಾಶ್‌ಚಂದ್ರ, ನಂದಕಿಶೋರ್ ಸುದ್ದಿಗೋಷ್ಠಿಯಲ್ಲಿದ್ದರು.