ಬೆಂಗಳೂರು : ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿ ವಿರೋಧಿಸಿ ಫೆ. 19 ರಂದು ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದೀಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ , ಕರ್ನಾಟಕ ಬಂದ್ ಗೆ ಕರೆ ನೀಡಿದ್ದರ ಕುರಿತು ತಿಳಿಸಿದ್ದಾರೆ.
ಫೆ. 19 ರಂದು ಬೆಳಿಗ್ಗೆ 6ರಿಂದ ಸಂಜೆಯವರೆಗೂ ಬಂದ್ ನಡೆಯಲಿದೆ. ಆಸ್ಪತ್ರೆ, ಔಷಧಿ, ಹಾಲು ಮಾರಾಟಕ್ಕೆ ಹೊರತುಪಡಿಸಿ, ಸಿನಿಮಾ, ಖಾಸಗಿ ವಾಹನ, ಬಸ್ ಸಂಚಾರ ಬಂದ್ ಆಗಲಿದೆ, ಹೋಟೆಲ್, ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಶಾಲಾ ಕಾಲೇಜ್ಗಳೂ ಕೂಡ ಬಂದ್ ಆಗಲಿವೆ ಎಂದರು. ಬಂದ್ ಗೆ ಬಿಬಿಎಂಪಿ ಅಧಿಕಾರಿಗಳು, ನೌಕರರ ಸಂಘಟನೆಗಳು, ಕೈಗಾರಿಕಾ ಸಂಘಟನೆಗಳು, ಸರ್ಕಾರಿ ನೌಕರರ ಸಂಘ, ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ನೌಕರರೂ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಲಿದೆ ಎಂದವರು ಹೇಳಿದ್ದಾರೆ.
ಬಂದ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ:
ಕರ್ನಾಟಕ ಬಂದ್ ಗೆ ಕರೆ ನೀಡಿದ ಸುದ್ದಿ ಹರಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ವಿರೋಧಿ ಮಾತುಗಳು ಕೇಳಿಬರುತ್ತಿವೆ. ಬಂದ್ ಮಾಡುವುದರಿಂದ ಭಯೋತ್ಪಾದನೆಯನ್ನು ನಿಲ್ಲಿಸಿದಂತೆ ಆಗುವುದಿಲ್ಲ.ಅದರ ಬದಲಾಗಿ ವೀರ ಯೋಧರ ನೆನಪಿನಲ್ಲಿ ಒಂದು ದಿನ ಹೆಚ್ಚುವರಿ ಕೆಲಸ ಮಾಡೋಣ ಎಂಬಿತ್ಯಾದಿ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.