ಕಾಡುವ ಅಪ್ಪನ ಕುರಿತು ವಿಶ್ವಪ್ರಕಾಶ ಮಲಗೊಂಡ ಬರೆದ ಆಪ್ತ ಸಾಲುಗಳು

ಮ್ಮನ ಕಂಬನಿ ಕಂಡಷ್ಟು ನಮಗೆ,
ಅಪ್ಪನ ಬೆವರಹನಿ ಕಾಣುವುದೇ ಇಲ್ಲ..!
ಅಪ್ಪನೆಂದರೆ ನಮ್ಮ ಮನೆಯ ಕಾಮಧೇನು !
ಬೇಡಿದ್ದೆಲ್ಲ ನೀಡಲೇ ಬೇಕಾದ ಕಲ್ಪವೃಕ್ಷ !

ಅಪ್ಪ ಅತ್ತಿದ್ದು ಕಂಡವರು ಕಡಿಮೆ !
ಅಪ್ಪ ನೋವುಗಳಿಲ್ಲದ ಸಮಚಿತ್ತ ಸರದಾರ !
ಹಬ್ಬ ಸಂತಸಗಳಲಿ ರೇಷ್ಮೆಸೀರೆ ಹೊಸಬಟ್ಟೆ ತೊಡಿಸಿ ಸಂಭ್ರಮಿಸುವ ಅಪ್ಪನುಡುಗೆ ಗಮನಿಸಿದವರಾರು?!
ಧರೆಯ ನಿತ್ಯ ಪೊರೆವ ಅಂಬರದಂತೆ ತಂದೆ ಸತಿಸುತರ ಹಗಲಿರುಳು ಕಾಯ್ವ ವಾತ್ಸಲ್ಯಧಾರೆ !
ಅಮ್ಮನ ಮಡಿಲಿಂದ ಕೈಹಿಡಿದು ನಮ್ಮನ್ನೆಲ್ಲ ಹೆಗಲಿಗೇರಿಸಿ, ಲೋಕ ತೋರಿಸಿದ ಮಾರ್ಗದರ್ಶಕ !

ನೋ

ವು-ಬೇವು ನಿರಾಸೆ ಸಂಸಾರದೊತ್ತಡಗಳ
ಹಾಲಾಹಲವನೆಲ್ಲ ನುಂಗಿ ನಗುವ ನೀಲಕಂಠ !
ಅಮ್ಮನೆಂದರೆ ಮಮತೆ ! ಅಪ್ಪನೆಂದರೆ ಭದ್ರತೆ !
ಸದಾ ಮಡದಿ-ಮಕ್ಕಳ ಭವಿಷ್ಯಕಾಗಿ ಬದುಕನೆ ಮುಡುಪಿಟ್ಟು ಬೆಳಗುವ ಕರ್ಪೂರದ ಹಣತೆ !
ಅಪ್ಪನ ಕಣ್ಣಲ್ಲಿ ಯಾವತ್ತೂ ನೀರಿಲ್ಲ
ಅಪ್ಪ ನೋವು ನುಂಗಿ ಇಂಗಿದ ಬಾವಿ !

ನಾ

ವು ಅಳುವಾಗಲೆಲ್ಲಾ ಅಪ್ಪ ಸಂತೈಸುತ್ತಿದ್ದ
ಅಪ್ಪ ಅಳುವುದಿಲ್ಲ ಸಂತೈಸಲು ಅಪ್ಪನಿಗೆ ಅಪ್ಪನಿಲ್ಲ !
ಅಪ್ಪ ಒಬ್ಬನೇ ನಕ್ಕಿಲ್ಲ ನಗುವಾಗ ನಗಿಸುತ್ತಿದ್ದ
ನೋವು ಹಂಚಲಿಲ್ಲ ಮರೆಯಲ್ಲೇ ನುಂಗಿದ್ದ !

ಅಮ್ಮನ ಕಣ್ಣೀರಿಗೆ ಅಪ್ಪ ಕರಗುವ ಮೌನಿಯಾಗಿ..
ಗೋಡೆ ನೋಡುತ್ತಾ ಸೋತು ಒರಗುವ !.
ಅಪ್ಪನ ಮಾತಿಗೆ ಮನೆ ತುಂಬಾ ಮೌನ,
ಅಪ್ಪನ ಮೌನಕ್ಕೆ ಮನೆಯೇ ಸ್ಮಶಾನ !
ಅಪ್ಪನ ಸಾಧನೆಗೆ ಅಮ್ಮನಿಗೂ ಸನ್ಮಾನ
ಅಪ್ಪ ಸೋತಾಗ ಅಮ್ಮನಿಗೂ ಅನುಮಾನ !

ಅಪ್ಪ

 

ಗಂಧದ ಕೊರಡು…
ಮನೆ ತುಂಬಾ ಪರಿಮಳ ತೇದು ತೇದು ಸವೆದಿದ್ದು ಯಾರಿಗೂ ತಿಳಿಯಲಿಲ್ಲ !
ಅಪ್ಪನ ಏಟು, ನಮ್ಮ ತಪ್ಪಿಗೆ ನೋವು ಮರೆಸಿದ್ದು ಮದ್ದಲ್ಲ….ಅಪ್ಪನ ಅಪ್ಪುಗೆ !
ಅಪ್ಪನ ಬಗ್ಗೆ ಒಂದಿಷ್ಟು ಸಣ್ಣವನ ಮಾತು
ಅಪ್ಪ ಸಣ್ಣವನಲ್ಲ ದೇವರಿಗೂ ಗೊತ್ತು !
ಅಪ್ಪಾ ಲೋಕ ಮೆಚ್ಚದಿರಬಹುದು ನಿನ್ನ…..
ನನಗಂತೂ ನೀನು ಅಪರಂಜಿ ಅಪ್ಪಟ ಚಿನ್ನ ..!
ಅಪ್ಪ ಐ ಲವ್ ಯು…

ವಿಶ್ವಪ್ರಕಾಶ ಮಲಗೊಂಡ
vishwaprakashmalagond@gmail.com