ಸಣ್ಣದೊಂದು ಝಲಕ್ ಮೂಲಕ ಚಿತ್ರತಂಡ ಶೀರ್ಷಿಕೆಯನ್ನು ಘೋಷಿಸಿದೆ. ನಾನಿ 30 ಚಿತ್ರಕ್ಕೆ ‘ಹಾಯ್ ನಾನ್ನ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ‘ಹಾಯ್ ನಾನ್ನ’ ಎಂಬುದು ತೆಲುಗು ಪದವಾಗಿದ್ದು, ‘ಹಾಯ್ ಅಪ್ಪ’ ಎಂಬ ಅರ್ಥ ನೀಡಲಿದೆ.
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್ಡಮ್ ಹೊಂದಿರುವ ನಟ ನಾನಿ. ‘ದಸರಾ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ನ್ಯಾಚುರಲ್ ಸ್ಟಾರ್ ನಟಿಸುತ್ತಿರುವ 30ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ.’ನಾನಿ 30′ ಚಿತ್ರದ ಶೀರ್ಷಿಕೆ ಗ್ಲಿಂಪ್ಸ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.
ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಾನಿ 30ಯ ಶೀರ್ಷಿಕೆ ಗ್ಲಿಂಪ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ನಾನಿಗೆ, ಮೃಣಾಲ್ ‘ಹಾಯ್ ನಾನ್ನ’ ಎನ್ನುವುದು ಆಕರ್ಷಕವಾಗಿದೆ. ಈ ಮೂಲಕ ಮೂವರ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಸಿನಿಮಾದಲ್ಲಿ ಮಹತ್ವದ ತಿರುವು ಸಿಗಲಿದೆ ಎಂಬ ಸುಳಿವನ್ನು ನಿರ್ಮಾಪಕರು ನೀಡಿದ್ದಾರೆ. ಮತ್ತೊಂದೆಡೆ, ಚಿತ್ರದಲ್ಲಿ ‘ಸಲಾರ್’ ಬ್ಯೂಟಿ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೌತ್ ಭಾಷೆಯಲ್ಲಿ ಒಂದೇ ಟೈಟಲ್ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ‘ಹಾಯ್ ನಾನ್ನ’ ಎಂದೇ ಶೀರ್ಷಿಕೆಯನ್ನು ಫೈನಲ್ ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಕಿಕ್ ಸ್ಟಾರ್ಟ್ ಸಿಕ್ಕಿರುವ ನಾನಿ 30ಗೆ, ಶೌರ್ಯುವ್ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕನಾಗಿ ಇದು ಇವರ ಮೊದಲನೇ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ ಮತ್ತು ಮಗಳ ಬಾಂಧವ್ಯದ ಸುತ್ತ ಸುತ್ತುತ್ತದೆ.
ಕೌಟುಂಬಿಕ ಪ್ರೇಕ್ಷಕರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುವ ನಾನಿಗೆ ಈ ಸಿನಿಮಾ ಖಂಡಿತ ಮತ್ತೊಂದು ಬಿಗ್ ಬ್ರೇಕ್ ನೀಡಲಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಈ ಹಿಂದೆ ತಂದೆ ಮತ್ತು ಮಗಳ ಸೆಂಟಿಮೆಂಟ್ನೊಂದಿಗೆ ಬಂದ ಹಲವು ಚಿತ್ರಗಳು ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದವು. ಇದರೊಂದಿಗೆ ಈ ಸಿನಿಮಾ ಕೂಡ ಒಳ್ಳೆ ಟಾಕ್ ಪಡೆಯಲಿದೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ‘ಹಾಯ್ ನಾನ್ನ’ ಚಿತ್ರೀಕರಣದ ಹಂತದಲ್ಲಿದೆ. ಮುಂಬೈನಲ್ಲಿ ಪ್ರಮುಖ ಶೆಡ್ಯೂಲ್ ಮುಗಿಸಿರುವ ಚಿತ್ರವು ಶರವೇಗದಲ್ಲಿ ಶೂಟಿಂಗ್ ನಡೆಸುತ್ತಿದೆ.
ವೈರ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ. ಸಿನಿಮಾವು ಡಿಸೆಂಬರ್ 21 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.