ಬೆಳ್ತಂಗಡಿ: ವಿಷಪೂರಿತ ಅಣಬೆ ಸೇವನೆಗೆ ಬಲಿಯಾಯ್ತು ಅಪ್ಪ-ಮಗನ ಜೀವ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ ವಿಷಪೂರಿತ ಅಣಬೆ ಸೇವಿಸಿದ್ದರಿಂದ ಅಪ್ಪ ಮಗ ಮೃತಪಟ್ಟ ಘಟನೆ ಮಂಗಳವಾರದಂದು ನಡೆದಿದೆ. ಧರ್ಮಸ್ಥಳಕ್ಕೆ ಸಮೀಪದ ಪುದುವೆಟ್ಟು ಗ್ರಾಮದ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(80) ಮತ್ತು ಅವರ ಪುತ್ರ ಓಡಿಯಪ್ಪ(41) ಮೃತಪಟ್ಟವರು. ಅಡುಗೆಗೆಂದು ಮಾಡಿದ್ದ ಅಣಬೆ ಪದಾರ್ಥ ವಿಷವಾಗಿ ಪರಿಣಮಿಸಿ ಈ ಸಾವು ಸಂಭವಿಸಿರಬಹದು ಎಂದು ಮೃತರ ಮನೆಯವರು ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ವಯೋವೃದ್ಧ ಗುರುವ ಹಾಗೂ ಅವರ ಇಬ್ಬರು ಪುತ್ರರಾದ ಕರ್ತ (60) ಹಾಗೂ ಓಡಿಯಪ್ಪ ವಾಸವಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದ ಬಳಿ ಯಾವುದೇ ಸೌಕರ್ಯಗಳಿರಲಿಲ್ಲ. ಸಿಮೆಂಟ್ ಬ್ಲಾಕ್, ಶೀಟ್ ಅಳವಡಿಸಿದ ಮನೆಯಲ್ಲಿ ವಾಸವಿದ್ದ ಇವರ ಬಳಿ ವಿದ್ಯುತ್ ವ್ಯವಸ್ಥೆ ಅಥವಾ ಗ್ಯಾಸ್ ಸಂಪರ್ಕವಿಲ್ಲ. ಮೃತಪಟ್ಟ ಇಬ್ಬರಲ್ಲೂ ಮೊಬೈಲ್ ಇರಲಿಲ್ಲ. ಮನೆಯಲ್ಲಿ ಅಪ್ಪ ಮತ್ತು ಇಬ್ಬರು ಗಂಡು ಮಕ್ಕಳಷ್ಟೇ ವಾಸವಾಗಿದ್ದು, ಗುರುವ ಅವರ ಪತ್ನಿ ಅನಾರೋಗ್ಯ ಪೀಡಿತೆಯಾಗಿದ್ದು ಮೊಮ್ಮಕಳ ಬಳೆ ವಾಸಿಸುತ್ತಿದ್ದಾರೆ. ಓಡಿಯಪ್ಪ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಕರ್ತ ಅವರ ಹೆಂಡತಿ ತೀರಿಕೊಂಡಿದ್ದಾರೆ.

ನ 21 ರಂದು 3 ಗಂಟೆ ಸುಮಾರಿಗೆ ಕರ್ತರವರು ಪುದುವೆಟ್ಟು ಪೇಟೆಗೆ ತೆರಳಿದ್ದ ಸಮಯ, ತಮ್ಮ ಓಡಿಯಪ್ಪ ಕಾಡಿನಿಂದ ಅಣಬೆಯನ್ನು ತಂದು ಅದನ್ನು ಬೇಯಿಸಿ ಪದಾರ್ಥ ಮಾಡಿ ಊಟ ಮಾಡಿದ್ದಾರೆ. ಕರ್ತ ಮದ್ಯ ವ್ಯಸನಿಯಾಗಿದ್ದು, ಸೋಮವಾರದಂದು ಸಂಜೆ 6 ಗಂಟೆ ಹೊತ್ತಿಗೆ ಮನೆಯಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿರುವ ಬೊಳ್ಳನಾರು ಎಂಬಲ್ಲಿ ಪಾನಮತ್ತನಾಗಿ ಬಿದ್ದಿದ್ದಾರೆ. ಮಂಗಳವಾರ ಬೆಳೆಗ್ಗೆ ಎಚ್ಚರವಾಗಿ ಮನೆಗೆ ಹೋಗಿ ನೋಡಿದಾಗ ತಂದೆ ಮತ್ತು ತಮ್ಮ ಮನೆಯ ಅಂಗಳದಲ್ಲಿ ಹೆಣವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಘಟನೆ ಬಳಿಕ ಸುತ್ತಮುತ್ತಲಿನವರು ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಗುರುವ ಹಾಗು ಓಡಿಯಪ್ಪ ಅಣಬೆಯನ್ನು ತಂದು ಪದಾರ್ಥ ಮಾಡಿ ರಾತ್ರಿ ಸೇವಿಸಿದ್ದು, ಇದರಿಂದಾಗಿ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ. ವಾಂತಿ-ಭೇದಿ ಆರಂಭವಾಗಿದ್ದು, ನೆರವಿಗಾಗಿ ಕೂಗಿಕೊಂಡಿದ್ದಾರೆ. ತೀರಾ ಹತ್ತಿರದಲ್ಲಿ ಯಾವುದೇ ಮನೆ ಇಲ್ಲದ ಕಾರಣ ಸಕಾಲಕ್ಕೆ ನೆರವು ದೊರೆತಿಲ್ಲ ಎಂದು ಅಂದಾಜಿಸಲಾಗಿದೆ. ಮನೆಯೊಳಗೆ ಅನ್ನ ಹಾಗೂ ಉಳಿದ ಅಣಬೆ ಪದಾರ್ಥ ಕಂಡುಬಂದಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯುಕ್ತ ಸೇವಿಸಿದ ಪರಿಣಾಮ ಈ ಸಾವು ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು ತನಿಖೆ ಬಳಿಕ ಸ್ಪಷ್ಟವಾದ ಕಾರಣ ತಿಳಿಯಬೇಕಿದೆ.