ಫಾಸ್ಟ್ ಟ್ಯಾಗ್ ಗೊಂದಲ: ಸಾಸ್ತಾನ ಟೋಲ್‌ನಲ್ಲಿ ಟ್ರಾಫಿಕ್ ಜಾಮ್: ಪ್ರಯಾಣಿಕರು-ಟೋಲ್ ಸಿಬ್ಬಂದಿಗಳ ಬಿರುಸಿನ ವಾಕ್ಸಮರ

ಕುಂದಾಪುರ: ಡಿ.೧೫ರಿಂದ ಟೋಲ್‌ನಲ್ಲಿ ನಗದು ಪಾವತಿಯ ಬದಲು ಫಾಸ್ಟ್ ಟ್ಯಾಗ್ ಮೂಲಕ ಡಿಜಿಟಲ್ ಪಾವತಿಯ ವ್ಯವಸ್ಥೆ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದ ಘಟನೆ ಭಾನುವಾರ ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಡೆದಿದೆ

ಇದರಿಂದಾಗಿ ಭಾನುವಾರ ಬೆಳಗ್ಗೆ ಸಾಸ್ತಾನ ಟೋಲ್‌ನಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಪ್ರಯಾಣಿಕರು ಹಾಗೂ ಟೋಲ್ ಸಿಬ್ಬಂದಿಗಳ ಬಿರುಸಿನ ವಾಕ್ಸಮರ ನಡೆಯಿತು.

ಸ್ಥಳೀಯರಿಗೆ ಲೇನ್ ಒಂದರಲ್ಲಿ ಉಚಿತ ಸಂಚಾರದ ವ್ಯವಸ್ಥೆ ಕಲ್ಪಿಸಿದ್ದರೂ ಮಾಹಿತಿಯ ಕೊರತೆಯಿಂದಾಗಿ ಎಲ್ಲ ವಾಹನಗಳು ಒಂದೇ ಲೇನ್‌ನಲ್ಲಿ ಆಗಮಿಸಿದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಯಿತು. ಕೆಲವು ವಾಹನ ಚಾಲಕರು
ಟೋಲ್ ಸಿಬ್ಬಂದಿಯ ಜತೆಗೆ ವಾದ ವಿವಾದದಲ್ಲಿ ತೊಡಗಿದ್ದರಿಂದ ಕೆಲಹೊತ್ತು ಗೊಂದಲ ಸೃಷ್ಟಿಯಾಯಿತು.

ಟ್ರಾಫಿಕ್ ಲೇನ್‌ನಲ್ಲಿ ಟೋಲ್ ಸಂಗ್ರಹ:
ವಾಃನ ದಟ್ಟಣೆಯುಂಟಾದ ಪರಿಣಾಮ ಟೋಲ್ ಸಿಬ್ಬಂದಿಗಳು ಟ್ರಾಫಿಕ್ ಲೇನ್‌ನಲ್ಲಿಯೇ ತೆರಳಿ ಟೋಲ್ ಅನ್ನು ಸಂಗ್ರಹಿಸುತ್ತಿರುವ ದೃಶ್ಯ ಕಂಡುಬಂದಿತು. ಕೆಲಕಾಲ ಬಿಗುವಿನ ವಾತವರಣೆ ಸೃಷ್ಠಿಯಾದ ಪರಿಣಾಮ ಟೋಲ್‌ನಲ್ಲಿ ಗಲಾಟೆ ನಡೆಯುವ ಸಾಧ್ಯತೆಯ ಹಿನ್ನಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಯನ್ನು ಏರ್ಪಡಿಸಲಾಯಿತು.

ಫಾಸ್ಟ್ ಟ್ಯಾಗ್ ಇದ್ದರೂ ಹಣ ಪಾವತಿ:
ಈ ಹಠಾತ್ ಬೆಳವಣಿಗೆಯಿಂದಾಗಿ ಫಾಸ್ಟ್ ಟ್ಯಾಗ್ ಮೂಲಕ ಸಂಚರಿಸಬೇಕೆಂಬ ಖುಷಿಯಲ್ಲಿದ್ದ ವಾಹನ ಸವಾರರು ನಿರಾಶರಾದರು. ಫಾಸ್ಟ್ ಟ್ಯಾಗ್ ಇರುವ ವಾಹನಗಳಿಗೆ ಪ್ರತ್ಯೇಕ ಲೇನ್‌ಗಳನ್ನು ಮೀಸಲಿಡಲಾಗಿದ್ದರೂ, ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ವಾಹನದ ಮಾಲೀಕರು ಹಣವನ್ನು ಪಾವತಿಸಿಯೇ ಸಾಗುತ್ತಿರುವ ದೃಶ್ಯಗಳು ಕಂಡುಬಂದವು.