ರೈತರ ಮೊಗದಲ್ಲಿ ಸಂತಸ : ಕೆಆರ್​ಎಸ್ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ

ಮಂಡ್ಯ: 2023ನೇ ಸಾಲಿನಲ್ಲಿ ಇದೇ ಅಧಿಕ ಪ್ರಮಾಣದ ಒಳ ಹರಿವು ಆಗಿದ್ದು. ಒಂದೇ ದಿನ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ರಾಜ್ಯ ಮತ್ತು ತಮಿಳುನಾಡಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಡ್ಯಾಂನ ಗರಿಷ್ಠ ನೀರಿನ ಮಟ್ಟ 124.80 ಅಡಿಯಾಗಿದ್ದು, ಈಗ ಅದು 82 ಅಡಿಗೆ ತಲುಪಿದೆ. 49.452 ಟಿಎಂಸಿ ಗರಿಷ್ಠ ಸಾಂದ್ರತೆ ಡ್ಯಾಂನಲ್ಲಿ 11.695 ಟಿಎಂಸಿ ನೀರು ಶೇಖರಣೆಯಾಗಿದೆಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆ ಕೆಆರ್​​ಎಸ್ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.

.ಡ್ಯಾಂನ ಒಳ ಹರಿವಿನ ಪ್ರಮಾಣ 13,499 ಕ್ಯೂಸೆಕ್ ಇದ್ದು, ಡ್ಯಾಂ ಹೊರಹರಿವು 353 ಕ್ಯೂಸೆಕ್ ಇದೆ. ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಬೆಂಗಳೂರು ಹಾಗೂ ಮೈಸೂರಿಗೆ ಕುಡಿಯುವ ನೀರಿನ ಸಮಸ್ಯೆಯಾಗುವ ಆತಂಕ ಶುರುವಾಗಿತ್ತು. ಇತ್ತೀಚೆಗೆ ಕೊಡಗಿನಲ್ಲಿ ಮಳೆಯಾದ ಕಾರಣ, ಪ್ರಸಕ್ತ ವರ್ಷದಲ್ಲಿ ಕೆಆರ್‌ಎಸ್‌ ಡ್ಯಾಂಗೆ ಮೊದಲ ಬಾರಿಗೆ ಸಾವಿರ ಕ್ಯೂಸೆಕ್‌ ನೀರು ಹರಿದು ಬಂದಿದೆ. ಹೀಗಾಗಿ ಅಗತ್ಯ ಪ್ರಮಾಣದ ಕುಡಿಯುವ ನೀರು ಲಭ್ಯವಾಗಲಿದೆ.

ತುಂಗಾ ಅಣೆಕಟ್ಟು ಭರ್ತಿ: ಮತ್ತೊಂದೆಡೆ, ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ಧಾರಾಕಾರವಾಗಿ ಸುರಿಯುತ್ತಿರುವ ಉತ್ತಮ ಮಳೆಯಿಂದ ಜಿಲ್ಲೆಯ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗಾಜನೂರು ಡ್ಯಾಂ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದ ಅತಿ ಚಿಕ್ಕ ಹಾಗೂ ಮೊದಲು ಭರ್ತಿಯಾಗುವ ಅಣೆಕಟ್ಟು ಎಂದೇ ಶಿವಮೊಗ್ಗದ ತುಂಗಾ ಡ್ಯಾಂ ಪ್ರಖ್ಯಾತಿ ಪಡೆದಿದೆ.

ಇದೀಗ, ಒಳ ಹರಿವಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವ ಕಾರಣ ಇಂದು ಎರಡು ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. 3 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 1.50 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಅಣೆಕಟ್ಟೆಗೆ 21 ಕ್ರಸ್ಟ್ ಗೇಟುಗಳನ್ನು ಅಳವಡಿಸಲಾಗಿದೆ. 588.24 ಅಡಿ ಎತ್ತರದ ಜಲಾಶಯದಲ್ಲಿ ಕಳೆದ ಒಂದು ವಾರದಿಂದ ಸುರಿದ ಉತ್ತಮ ಮಳೆಯಿಂದ 588.24 ಅಡಿಯಷ್ಟು ನೀರು ಸಂಗ್ರಹವಾಗಿದೆ.

ಇದೀಗ, ಗಾಜನೂರು ಗ್ರಾಮದಲ್ಲಿನ ತುಂಗಾ ಅಣೆಕಟ್ಟು ಭರ್ತಿಯಾಗಿ ನದಿಗೆ 7,545 ಕ್ಯೂಸೆಕ್ ನೀರನ್ನು‌ ಬಿಡಲಾಗುತ್ತಿದೆ. ಎರಡು ಕ್ರಸ್ಟ್ ಗೇಟ್​ಗಳ ಮೂಲಕ ಎರಡು ಸಾವಿರ ಕ್ಯೂಸೆಕ್ ನೀರು ಹಾಗೂ ಅದೇ ರೀತಿ ವಿದ್ಯುತ್ ಉತ್ಪಾದನೆಗೂ ಸಹ ನೀರು ಬಿಡಲಾಗುತ್ತಿದೆ.

ಅಣೆಕಟ್ಟಿನ‌ ಹಿನ್ನೀರಿನ ಪ್ರದೇಶಗಳಾದ ಶೃಂಗೇರಿ, ಆಗುಂಬೆ, ತೀರ್ಥಹಳ್ಳಿ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದರಿಂದ ಜಲಾಶಯದ ಒಳ ಹರಿವು ಕೂಡಾ ಹೆಚ್ಚಾಗಿದೆ. ಇದರ ಪರಿಣಾಮ ನಿನ್ನೆ ರಾತ್ರಿ 10 ಸಾವಿರ ಕ್ಯೂಸೆಕ್ ಒಳ ಹರಿವು ಬಂದಿದ್ದು, ಐದಕ್ಕೂ ಅಧಿಕ ಗೇಟ್​ಗಳ ಮೂಲಕ ನದಿಗೆ ನೀರು ಬಿಡಲಾಗಿತ್ತು.