ಖ್ಯಾತ ಕಿರುತೆರೆ ನಟ ಮಂಡ್ಯ ರವಿ ಇನ್ನಿಲ್ಲ

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟ, ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿಯಾಗಿ ಪ್ರೇಕ್ಷಕರ ಹೃದಯ ಗೆದ್ದಿದ್ದ ನಟ ಮಂಡ್ಯ ರವಿ ಇಂದು ಸಂಜೆ ನಿಧನರಾಗಿದ್ದಾರೆ.

ನಟ ರವಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ.

ಮಗಳು ಜಾನಕಿ ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದಿದ್ದ ಅವರು ಧಾರಾವಾಹಿಯಲ್ಲಿ ರವಿ ಚಂದುಭಾರ್ಗಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಟ ರವಿ ಅವರು ಅನೇಕ ಧಾರಾವಾಹಿಗಳಲ್ಲಿ ಪಾತ್ರವಹಿಸಿದ್ದು, ಚಿತ್ರಲೇಖ, ಮಿಂಚು, ಮುಕ್ತ ಮುಕ್ತ, ವರಲಕ್ಷ್ಮೀ ಸ್ಟೋರ್ಸ್ ಮುಂತಾದ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಗುರುತಿಸಿ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಇನ್ನು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಫೈಲ್ ಕಾರ್ಯಕ್ರಮವನ್ನು ರವಿಪ್ರಸಾದ್ ನಿರೂಪಣೆ ಮಾಡಿದ್ದರು.