ಬೆಂಗಳೂರು, : ಹಲವು ದಶಕಗಳ ಕಾಲ ಭಾರತೀಯರ ನೆಚ್ಚಿನ ವಾಚ್ ಬ್ರ್ಯಾಂಡ್ ಆಗಿದ್ದ ಹೆಚ್ಎಂಟಿ (HMT) ಇದೀಗ ಮತ್ತೆ ಗ್ರಾಹಕರ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ‘ಗಂಡಭೇರುಂಡ ಕನ್ನಡಿಗ’ ಹೆಸರಿನ ವಿಶೇಷ ವಾಚ್ ಸರಣಿಯನ್ನು ಬಿಡುಗಡೆ ಮಾಡಿರುವುದು ಬ್ರ್ಯಾಂಡ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ, ಹೆಚ್ಎಂಟಿ ವಾಚ್ಗಳ ಮೇಲಿನ ಹೆಚ್ಚುತ್ತಿರುವ ಆಸಕ್ತಿಯನ್ನು ದುರುಪಯೋಗಪಡಿಸಿಕೊಂಡು ಮಾರುಕಟ್ಟೆಯಲ್ಲಿ ನಕಲಿ ವಾಚ್ಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕಂಪನಿಗೆ ತಲೆನೋವಾಗಿ ಪರಿಣಮಿಸಿದೆ.
ಕಂಪನಿಯ ಅಧಿಕೃತ ಸಂಗ್ರಹದಲ್ಲಿ ಲಭ್ಯವಿಲ್ಲದ ಕೆಲವು ಮಾದರಿಯ ವಾಚ್ಗಳು ಆನ್ಲೈನ್ನಲ್ಲಿ ಮಾರಾಟಕ್ಕೆ ಕಾಣಿಸಿಕೊಂಡಿದ್ದರಿಂದ ಹೆಚ್ಎಂಟಿ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಈ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಲು ಮುಂದಾದ ಕಂಪನಿಯ ಸಿಎಂಡಿ ರಮೇಶ್ ಅವರು ಫ್ಲಿಪ್ಕಾರ್ಟ್ ಮೂಲಕ ಹೆಚ್ಎಂಟಿ ಹೆಸರಿನ ವಾಚ್ ಒಂದನ್ನು ಖರೀದಿಸಿದ್ದರು. ಆದರೆ, ಪಾರ್ಸೆಲ್ ತೆರೆದು ನೋಡಿದಾಗ ಅಲ್ಲಿ ಕಂಡುಬಂದಿದ್ದು ಕೇವಲ 290 ರೂ. ಬೆಲೆಯ ಕಳಪೆ ಗುಣಮಟ್ಟದ ವಾಚ್. ಪರಿಶೀಲನೆಯ ಬಳಿಕ ಅದು ಕಂಪನಿಯ ಅಧಿಕೃತ ಉತ್ಪನ್ನವಲ್ಲ ಎಂಬುದು ಗೊತ್ತಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೆಚ್ಎಂಟಿ, ತನ್ನ ಹೆಸರಿನಲ್ಲಿ ನಕಲಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿರುವುದಕ್ಕೆ ಸಂಬಂಧಿಸಿ ಫ್ಲಿಪ್ಕಾರ್ಟ್ಗೆ ಕಾನೂನು ನೋಟಿಸ್ ಕಳುಹಿಸಿದೆ.

ಆನ್ಲೈನ್ ಮಾರುಕಟ್ಟೆಯಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ನಕಲಿ ಹೆಚ್ಎಂಟಿ ವಾಚ್ಗಳ ಮಾರಾಟ ನಡೆಯುತ್ತಿದೆ ಎಂಬ ಆರೋಪವಿದೆ. ಹಳೆಯ ವಾಚ್ಗಳನ್ನು ದುರಸ್ತಿಗೊಳಿಸಿ ಮರುಮಾರಾಟ ಮಾಡುವ ರಿಫರ್ಬಿಷ್ಡ್ ವಾಚ್ಗಳೆಂದು ಬಿಂಬಿಸಿ ನಕಲಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತಿದೆ ಎನ್ನಲಾಗಿದೆ. ಇಂತಹ ವಾಚ್ಗಳನ್ನು ಅಸಲಿ ಎಂದು ನಂಬಿ ಖರೀದಿಸುವ ಗ್ರಾಹಕರು ಮೋಸ ಹೋಗುವ ಸಾಧ್ಯತೆಯಿದೆ. ಹೀಗಾಗಿ ನಕಲಿ ವಾಚ್ಗಳ ಪ್ರಚಾರದಲ್ಲಿ ತೊಡಗಿದ್ದ ಕೆಲವರಿಗೂ ಕಂಪನಿ ಕಾನೂನು ನೋಟಿಸ್ ನೀಡಿದೆ.
ಇದೇ ವೇಳೆ ಬೆಂಗಳೂರಿನ ಜೆ.ಪಿ. ನಗರದ ಕ್ಲಾಸಿಕ್ ಟೈಮ್ ಮಳಿಗೆಯಲ್ಲಿಯೂ ನಕಲಿ ಹೆಚ್ಎಂಟಿ ವಾಚ್ಗಳನ್ನು ಅಸಲಿ ಉತ್ಪನ್ನಗಳೆಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಮಳಿಗೆಯ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಕಂಪನಿ ಸಿದ್ಧತೆ ನಡೆಸಿದೆ.
ಚೀನಾ ಮಾರುಕಟ್ಟೆಯಿಂದ ನಕಲಿ ವಾಚ್ಗಳನ್ನು ತರಿಸಿಕೊಂಡು ಹೆಚ್ಎಂಟಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ದೀರ್ಘ ವಿರಾಮದ ಬಳಿಕ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತಿರುವ ಕಂಪನಿಗೆ ಇಂತಹ ಬೆಳವಣಿಗೆಗಳು ದೊಡ್ಡ ಸವಾಲಾಗಿವೆ. ನಕಲಿ ವಾಚ್ಗಳ ಮಾರಾಟದಿಂದ ಗ್ರಾಹಕರಿಗೆ ವಂಚನೆಯಾಗುವುದರ ಜೊತೆಗೆ ಬ್ರ್ಯಾಂಡ್ನ ದೀರ್ಘಕಾಲದ ವಿಶ್ವಾಸಾರ್ಹತೆಗೂ ಧಕ್ಕೆಯಾಗುವ ಆತಂಕವಿದೆ.
ಈ ಹಿನ್ನೆಲೆಯಲ್ಲಿ ಹೆಚ್ಎಂಟಿ ಕಂಪನಿ ನಕಲಿ ವಾಚ್ಗಳ ಮಾರಾಟದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಸಿಎಂಡಿ ರಮೇಶ್ ಎಚ್ಚರಿಕೆ ನೀಡಿದ್ದಾರೆ. ಗ್ರಾಹಕರು ವಾಚ್ ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಹಾಗೂ ಅಧಿಕೃತ ಮಾರಾಟ ಮಳಿಗೆಗಳನ್ನೇ ಆಯ್ಕೆ ಮಾಡಿಕೊಳ್ಳುವಂತೆ ಕಂಪನಿ ಸೂಚಿಸಿದೆ. ಬೆಂಗಳೂರಿನ ಎಂ.ಜಿ. ರಸ್ತೆ, ಬಳ್ಳಾರಿ ರಸ್ತೆ ಮತ್ತು ಜಾಲಹಳ್ಳಿಯ ಹೆಚ್ಎಂಟಿ ಮ್ಯೂಸಿಯಂನಲ್ಲಿ ಅಧಿಕೃತ ವಾಚ್ಗಳು ಮಾರಾಟಕ್ಕೆ ಲಭ್ಯವಿವೆ ಎಂದು ತಿಳಿಸಿದೆ.
ಮತ್ತೆ ಮಾರುಕಟ್ಟೆಯಲ್ಲಿ ಬೇಡಿಕೆ ಗಳಿಸುತ್ತಿರುವ ಹೆಚ್ಎಂಟಿ ವಾಚ್ಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳು ಕಾಣಿಸಿಕೊಳ್ಳುತ್ತಿರುವುದು ಕಂಪನಿಯ ಪುನರುತ್ಥಾನದ ಹಾದಿಯಲ್ಲಿ ಹೊಸ ಸಮಸ್ಯೆಯಾಗಿದೆ. ಹೀಗಾಗಿ ಆಕರ್ಷಕ ಬೆಲೆ ಅಥವಾ ಬ್ರ್ಯಾಂಡ್ ಹೆಸರನ್ನು ಮಾತ್ರ ನಂಬಿ ವಾಚ್ ಖರೀದಿಸದೆ, ಅದರ ಅಸಲಿತನವನ್ನು ಖಚಿತಪಡಿಸಿಕೊಳ್ಳುವುದು ಗ್ರಾಹಕರಿಗೆ ಅನಿವಾರ್ಯವಾಗಿದೆ.















