ನಕಲಿ ಅಂಕಪಟ್ಟಿ: ಬಿಜೆಪಿ ಶಾಸಕನಿಗೆ ಶಿಕ್ಷೆ

ಅಯೋಧ್ಯೆ: ಕಾಲೇಜಿಗೆ ಪ್ರವೇಶ ಪಡೆಯಲು ನಕಲಿ ಅಂಕಪಟ್ಟಿ ನೀಡಿದ್ದ 28 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅಯೋಧ್ಯೆಯ ಗೋಸಾಯ್‌ಗಂಜ್‌ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ತಿವಾರಿಗೆ ಸೋಮವಾರ ವಿಶೇಷ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇಂದ್ರ ಪ್ರತಾಪ್ ತಿವಾರಿ ಅಲಿಯಾಸ್ ಖಬ್ಬು ತಿವಾರಿ ಅಯೋಧ್ಯೆಯ ಗೋಸಾಯ್‌ಗಂಜ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ.
‌1992 ರಲ್ಲಿ ತಿವಾರಿ ವಿರುದ್ಧ ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನ ಅಂದಿನ ಪ್ರಾಂಶುಪಾಲ ಯದುವಂಶ ರಾಮ್ ತ್ರಿಪಾಠಿ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಎರಡನೇ ವರ್ಷದ ಪದವಿಯಲ್ಲಿ ಅನುತ್ತೀರ್ಣಗೊಂಡಿದ್ದ ತಿವಾರಿ 1990 ರಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಮುಂದಿನ ತರಗತಿಗೆ ಪ್ರವೇಶ ಪಡೆದಿದ್ದರು ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಕರಣ ದಾಖಲಾಗಿ 13 ವರ್ಷಗಳ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಹಲವು ಮೂಲ ದಾಖಲೆಗಳು ಕಣ್ಮರೆಯಾಗಿದ್ದವು. ದ್ವಿತೀಯ ಪ್ರತಿಗಳ ಆಧಾರದಲ್ಲಿ ವಿಚಾರಣೆ ನಡೆದಿತ್ತು. ದೀರ್ಘ ಕಾಲದ ವಿಚಾರಣೆಯ ಈ ಅವಧಿಯಲ್ಲೇ ದೂರುದಾರ ತ್ರಿಪಾಠಿ ಅವರು ಮೃತಪಟ್ಟಿದ್ದರು.

ಆಗಿನ ಸಾಕೇತ್ ಕಾಲೇಜಿನ ಡೀನ್ ಆಗಿದ್ದ ಮಹೇಂದ್ರ ಕುಮಾರ್ ಅಗರವಾಲ್ ಮತ್ತು ಇತರ ಸಾಕ್ಷಿಗಳು ಶಾಸಕ ತಿವಾರಿ ವಿರುದ್ಧ ಸಾಕ್ಷಿ ನೀಡಿದ್ದರು.