ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧಿ ಜಾಲದ ತನಿಖೆ ಮತ್ತಷ್ಟು ವಿಸ್ತರಿಸಿದೆ. ಈ ಜಾಲಕ್ಕೆ ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನ್ನೈ ಹಾಗೂ ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ನಂಟು ಇರುವ ಶಂಕೆ ವ್ಯಕ್ತವಾಗಿದೆ.
ಬಿದದಿ ಸಮೀಪದ ಲೈಸೆನ್ಸ್ರಹಿತ ಘಟಕದ ಮೇಲೆ ನಡೆದ ದಾಳಿಯಲ್ಲಿ ನಕಲಿ ಔಷಧಗಳು, ಪ್ಯಾಕೇಜಿಂಗ್ ಯಂತ್ರಗಳು, ಖಾಲಿ ವಯಲ್ಗಳು ಹಾಗೂ ನಕಲಿ ಲೇಬಲ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು ₹5 ಕೋಟಿ ಎಂದು ವರದಿಯಾಗಿದೆ.
ಜಾಲದ ಅಂತರರಾಜ್ಯ ಸಂಪರ್ಕದ ಹಿನ್ನೆಲೆಯಲ್ಲಿ ಡ್ರಗ್ ಕಂಟ್ರೋಲರ್ಗಳ ಐದು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಈ ತಂಡಗಳು ಸಂಬಂಧಿತ ರಾಜ್ಯಗಳಿಗೆ ತೆರಳಿ ನಕಲಿ ಔಷಧಿಗಳ ಮೂಲ, ಪೂರೈಕೆ ಹಾಗೂ ವಿತರಣಾ ಜಾಲದ ಕುರಿತು ಮಾಹಿತಿ ಕಲೆಹಾಕಲಿವೆ.
ತನಿಖೆ ಮುಂದುವರಿದಿದ್ದು, ದೇಶದ ವಿವಿಧ ರಾಜ್ಯಗಳ ಔಷಧ ನಿಯಂತ್ರಣ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜಾಲದ ಸಂಪೂರ್ಣ ಸಂಪರ್ಕವನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.















