ಉಡುಪಿ: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಘಟಕವು ಕಾಲೇಜಿನ ಐ ಎಸ್ ಟಿ ಇ ಘಟಕದ ಸಹಯೋಗದೊಂದಿಗೆ ಆಯೋಜಿಸಲಾದ ಐದು ದಿನದ
ಬೋಧಕರ ಅಭಿವೃದ್ದಿ ಕಾರ್ಯಾಗಾರ “ಉತ್ಕರ್ಷ” ಇದರ ಉದ್ಘಾಟನೆ ಸೋಮವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿ, ಬಿ ಎನ್ ಎಮ್ ತಾಂತ್ರಿಕ ವಿದ್ಯಾಲಯದ ಭಗವಾನ್ ಎಸ್ ಕೆ ಮಾತನಾಡಿ 21ನೇ ಶತಮಾನದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಮತ್ತು ಸಂಸ್ಥೆಯ ಯಶಸ್ಸಿಗೆ ಅಧ್ಯಾಪಕರು ಎಲ್ಲಾ ಕೌಶಲ್ಯವನ್ನು ಹೊಂದಿರಬೇಕು ಮತ್ತು ಬೋಧನಾ ಕಲಿಕೆಯು ಜೀವನದುದ್ದಕ್ಕೂ ಮುಂದುವರೆಯುವಂತ ಪ್ರಕ್ರಿಯೆಯಾಗಿರಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಈ
ಕಾರ್ಯಗಾರದಲ್ಲಿ ಭಗವಾನ್ ಎಸ್ ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವುದು ನಮಗೆ ಹೆಮ್ಮೆ ಎಂದು ತಿಳಿಸಿದರು. ಆಧುನಿಕ ತಂತ್ರಜ್ಞಾನವು ವಿದ್ಯಾರ್ಥಿಗಳಿಗೆ ಅತ್ಯಂತ ವೇಗವಾಗಿ ಮಾಹಿತಿಯನ್ನು ಪಡೆಯುವಂತೆ ಮಾಡಿದೆ ಹಾಗಾಗಿ ಬೋಧಕರು ಇಂತಹ ಅಭಿವೃದ್ದಿ ಕಾರ್ಯಾಗಾರದಲ್ಲಿ ಭಾಗವಹಿಸಿ
ಅಧ್ಯಾಪನದ ಕೌಶಲ್ಯವನ್ನು ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು. ಈ ಕಾರ್ಯಗಾರವನ್ನು ಆಯೋಜಿಸಿದ್ದಕ್ಕಾಗಿ ಅವರು ಪ್ರಾಂಶುಪಾಲರನ್ನು ಮತ್ತು ಆಂತರಿಕ ಗುಣಮಟ್ಟ ಘಟಕದ
ಸಂಯೋಜಕರನ್ನು ಅಭಿನಂದಿಸಿದರು.
ಸಂಸ್ಥೆಯ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ಪೀಳಿಗೆಯ ಯುವಕರಿಗೆ ಶಿಕ್ಷಣ ನೀಡುವಲ್ಲಿ ಅಧ್ಯಾಪಕರು ಪ್ರಮುಖ ಪಾತ್ರವಹಿಸುವುದರಿಂದ ಅವರು ಇಂತಹ ಕಾರ್ಯಗಾರದಲ್ಲಿ ಭಾಗವಹಿಸಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು
ತಿಳಿಸಿದರು.
ಈ ಕಾರ್ಯಗಾರದಲ್ಲಿ ಆಂತರಿಕ ಗುಣಮಟ್ಟ ಘಟಕದ ಸಂಯೋಜಕ ಡಾ. ಸುದರ್ಶನ್ ರಾವ್ ಸ್ವಾಗತಿಸಿದರು.
ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕಿಶಶಿಕಲಾ ವಂದಿಸಿ, ಅಕ್ಷತಾರಾವ್ ನಿರೂಪಿಸಿದರು.












