ಮರಕ್ಕೆ ಕಟ್ಟಿ ಹಾಕಿ ಸುಲಿಗೆ, ಕೊಲೆ ಬೆದರಿಕೆ – ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

ಪಡುಬಿದ್ರಿ: ನಿವೃತ್ತ ಬಿಎಸ್ಸೆನ್ನೆಲ್‌ ಉದ್ಯೋಗಿ, ಪೂಂದಾಡು ನಿವಾಸಿ ಲಕ್ಷ್ಮಿ ನಾರಾಯಣ ಅವರು ಇನ್ನಾ ಗ್ರಾಮದ ಮೈಕ್ರೋವೇವ್‌ ಸ್ಟೇಶನ್‌ಗೆ ಎ. 17ರಂದು ಹೋಗಿದ್ದಾಗ ಸ್ಥಳೀಯ ಆರೋಪಿಗಳಾದ ಶೈಲೇಶ್‌, ವಿಠ್ಠಲ್, ರಂಜಿತ್‌ ಹಾಗೂ ಇನ್ನಿಬ್ಬರು ಕೈಯಿಂದ, ಮರದ ಸೋಂಟೆಯಿಂದ, ಹೆಲ್ಮೆಟ್‌, ಬೆಲ್ಟ್‌ಗಳಿಂದ ಹೊಡೆದು ಅಲ್ಲೇ ಮರವೊಂದಕ್ಕೆ ಕಟ್ಟಿಹಾಕಿ, ಮೊಬೈಲ್‌, ಪರ್ಸ್‌ ಹಾಗೂ ಬೈಕಿನ ಕೀಯನ್ನು ಕಿತ್ತುಕೊಂಡು ಪರ್ಸ್‌ನಲ್ಲಿದ್ದ 3000 ರೂ.ಗಳನ್ನು ಸುಲಿಗೆ ಮಾಡಿ, ಕೊಲೆ ಬೆದರಿಕೆಯನ್ನು ಒಡ್ಡಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಸ್ಮಿ ನಾರಾಯಣ ಅವರ ತಂದೆಯ ತಂಗಿ ಮನೆಯೂ ಇನ್ನಾ ಗ್ರಾಮದ ಗುರ್ಮೇರು ಎಂಬಲ್ಲಿದ್ದು ಅಲ್ಲಿಗೆ ಹೋಗಿದ್ದ ಅವರು ಸೋದರತ್ತೆಯ ಮಗಳು ಮೋಹಿತಾಳ ಚೈನನ್ನು ಪಡೆದು ಮುಂಡ್ಕೂರು ಸಹಕಾರಿ ಸೇವಾ ಸಂಘದಿಂದ 18,000 ರೂ. ಸಾಲ ಪಡೆದಿದ್ದರು. 15,000 ರೂ.ಗಳನ್ನು ಕಿಸೆಯಲ್ಲಿರಿಸಿದ್ದ ಅವರು 3,000 ರೂ. ಗಳನ್ನು ಪರ್ಸ್‌ನಲ್ಲಿರಿಸಿ ಮೈಕ್ರೋವೇವ್‌ ಸ್ಟೇಶನ್‌ಗೆ ಹೋಗಿದ್ದಾಗ ಈ ಘಟನೆ ನಡೆದಿದೆ.

ಮರಕ್ಕೆ ಕಟ್ಟಿ ಹಾಕಿದ ಅನಂತರ ಸ್ಥಳೀಯರಾದ ಗೀತಾ ಹಾಗೂ ಪ್ರೇಮಾ ಅವರನ್ನು ಘಟನಾ ಸ್ಥಳಕ್ಕೆ ಆರೋಪಿಗಳು ಕರೆಸಿಕೊಂಡಿದ್ದಾರೆ. ಆರೋಪಿಗಳ ಮಾತಿನಂತೆ ಗೀತಾ ಹಾಗೂ ಪ್ರೇಮಾ ಮರಕ್ಕೆ ಕಟ್ಟಿದ್ದ ಲಕ್ಷ್ಮಿ ನಾರಾಯಣರನ್ನು ಬಿಡಿಸಿದ್ದಾರೆ. ಇನ್ನು ಇಲ್ಲಿಗೆ ಬಂದದ್ದೇ ಆದಲ್ಲಿ ಮರಕ್ಕೆ ನೇತು ಹಾಕುವುದಾಗಿ ಆರೋಪಿಗಳು ಕೊಲೆ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ದೂರದಾರ ಲಕ್ಷ್ಮಿ ನಾರಾಯಣ ಅವರು ಎ. 17ರಂದು ಉಡುಪಿಯ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.