ಎಕ್ಸ್‌ಪರ್ಟ್ ಪಿಯು ಕಾಲೇಜು ವಳಚ್ಚಿಲ್‌ ಕ್ಯಾಂಪಸ್‌ಗೆ ಗ್ರೀನ್ ಅವಾರ್ಡ್

ಮಂಗಳೂರು: ಜಿಐಬಿ ಇಂಡಿಯಾ ನೀಡುವ ಗ್ರೀನ್ ಅವಾರ್ಡ್ ಅನ್ನು ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್ ಪಡೆದುಕೊಂಡಿದೆ. ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹಾಗೂ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್.ನಾಯಕ್ ಅವರು ಪುರಸ್ಕಾರವನ್ನು ಪಡೆದುಕೊಂಡರು.

ಪ್ರಶಸ್ತಿಗಾಗಿ ವಿಶ್ವದ ನಾನಾ ಭಾಗದ 1000ಕ್ಕೂ ಅಧಿಕ ಸಂಸ್ಥೆಗಳು ನಾಮನಿರ್ದೇಶನಗೊಂಡಿದ್ದವು. ಪರಿಣಿತ ತೀರ್ಪುಗಾರರ ತಂಡವು ಸಮಗ್ರ ಅಧ್ಯಯನ ನಡೆಸಿ ಅಂತಿಮ ಹಂತದಲ್ಲಿ 20 ಸಂಸ್ಥೆಗಳಿಗೆ ಗ್ರೀನ್ ಪುರಸ್ಕಾರ ನೀಡಿ ಗೌರವಿಸಿದೆ. ಇದರಲ್ಲಿ ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಎಕ್ಸ್‌ಪರ್ಟ್ ಕ್ಯಾಂಪಸ್ ಒಂದಾಗಿದ್ದು, ವಳಚ್ಚಿಲ್ ಕ್ಯಾಂಪಸ್‌ನಲ್ಲಿ ಹಸಿರೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ತೆಗೆದುಕೊಂಡಿರುವ ಸುಸ್ಥಿರ ಕ್ರಮ ಹಾಗೂ ಹಸಿರೀಕರಣಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ವಿಶೇಷ ಪುರಸ್ಕಾರವನ್ನು ಸಂಸ್ಥೆಗೆ ನೀಡಲಾಗಿದೆ.

ವಳಚ್ಚಿಲ್ ಪ್ರದೇಶವು ವರ್ಷಗಳ ಹಿಂದೆ ಬಂಜರು ಪ್ರದೇಶವಾಗಿತ್ತು. ಲ್ಯಾಟರೈಟ್ ಕಲ್ಲಿನಿಂದ ಕೂಡಿದ ಪ್ರದೇಶವಾಗಿತ್ತು. ಅಂತಹ ಪ್ರದೇಶದಲ್ಲಿ ನೈಸರ್ಗಿಕ ಗುಡ್ಡಗಾಡುಗಳಿಗೆ ಯಾವುದೇ ಹಾನಿಯಾಗದಂತೆ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಎಕ್ಸ್‌ಪರ್ಟ್ ಕ್ಯಾಂಪಸ್‌ನಲ್ಲಿ ಮೂರು ಸಾವಿರಕ್ಕೂ ಅಧಿಕ ಗಿಡಗಳನ್ನು ವಿವಿಧ ಹಂತಗಳಲ್ಲಿ ನೆಟ್ಟು ಬೆಳೆಸಲಾಗಿದೆ. ಇದೀಗ ಅವುಗಳು ಮರಗಳಾಗಿ ಬೆಳೆದಿವೆ. ಇಲ್ಲಿ ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರೊಂದಿಗೆ 165 ಕಿ.ವ್ಯಾ.ನ ಸೌರ ವಿದ್ಯುತ್ ಅನ್ನು ಉತ್ಪಾದನೆ ಮಾಡಲಾಗುತ್ತಿದೆ. ಮಳೆ ನೀರು ಸಂಗ್ರಹಿಸಿ, ಮಳೆ ಕೊಯ್ಲು ಮಾಡಲಾಗುತ್ತಿದೆ. ಉಪಯೋಗಿಸಿದ ನೀರನ್ನು ಪರಿಷ್ಕರಣೆಗೊಳಿಸಿ, ಮರ ಗಿಡಗಳಿಗೆ ಹಾಯಿಸಲಾಗುತ್ತಿದೆ. ಆಹಾರ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ, ಮರ ಗಿಡಗಳಿಗೆ ಹಾಕಲಾಗುತ್ತಿದೆ. ವಿವಿಧ ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಸಲಾಗುತ್ತಿದೆ. ಇಂತಹ ಹಲವು ಪರಿಸರ ಸ್ನೇಹಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಹಸಿರಿನ ಕ್ರಾಂತಿಯನ್ನು ಉತ್ತೇಜಿಸಲಾಗುತ್ತಿದೆ.

ಪ್ರಕೃತಿಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ನಾವು ಪ್ರಕೃತಿಯ ರಕ್ಷಣೆ ಮಾಡಿದರೆ ಪ್ರಕೃತಿಯು ನಮ್ಮನ್ನು ರಕ್ಷಿಸುತ್ತದೆ. ಈ ನಡುವೆ ವಳಚ್ಚಿಲ್‌ನಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಲು ಸಂಸ್ಥೆಯು ಯೋಜನೆ ಕೈಗೆತ್ತಿಕೊಂಡಾಗ, ಮಾದರಿ ಕ್ಯಾಂಪಸ್ ನಿರ್ಮಾಣ ಮಾಡಬೇಕು ಎಂದು ಯೋಜನೆ ಹಾಕಿಕೊಂಡೆವು. ಪರಿಸರವು ವಿದ್ಯಾರ್ಜನೆಗೆ ಪೂರಕವಾಗಬೇಕು. ಉತ್ತಮ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕ್ಯಾಂಪಸ್‌ನಲ್ಲಿ ಲಭ್ಯ ಇರುವ ಜಾಗದಲ್ಲಿ ಗಿಡಗಳನ್ನು ವೈಜ್ಞಾನಿಕವಾಗಿ ನೆಟ್ಟು ಬೆಳೆಸಿದೆವು. ಈ ಮೂಲಕ ನಮ್ಮ ದೇಶದ ಯುವ ಜನರಿಗೆ ಅವರ ಮುಂದಿನ ಭವಿಷ್ಯದಲ್ಲಿ ಇಂತಹ ಹಸಿರು ಕ್ರಾಂತಿಯನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ಜಾಗೃತಿ ಮೂಡಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.