ಉಡುಪಿ: ಸುರತ್ಕಲ್ ಟೋಲ್ ರದ್ದು ಮಾಡಿ ಅದರ ಶುಲ್ಕವನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಇದರಿಂದಾಗಿ ಉಂಟಾಗುವ ಪರಿಣಾಮಗಳ ಬಗ್ಗೆ ಡಿ. 01ರಂದು ಶಾಸಕ ರಘುಪತಿ ಭಟ್ ಅವರು ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಮನವಿ ಸ್ವೀಕರಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಈ ವಿಷಯದ ಕುರಿತಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಡಿ. 5 ರಂದು ಸಭೆ ನಡೆಸುವುದಾಗಿ ತಿಳಿಸಿದರು.
ಉಡುಪಿ – ಚಿಕ್ಕಮಗಳೂರು ಸಂಸದೆ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಗುಜರಾತ್ ಚುನಾವಣೆಯಲ್ಲಿರುವುದರಿಂದ ಅವರ ಸೂಚನೆಯಂತೆ ಡಿ. 30 ರಂದು ಶೋಭಾ ಕರಂದ್ಲಾಜೆ ಅವರ ದೆಹಲಿ ಕಚೇರಿ ಅಧಿಕಾರಿಗಳು ಹಾಗೂ ಆಪ್ತ ಕಾರ್ಯದರ್ಶಿಗಳೊಂದಿಗೆ ಈ ವಿಷಯದ ಕುರಿತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುವುದಕ್ಕೂ ಮುನ್ನ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿ ಅವರಿಗೆ ಮನವರಿಕೆ ಮಾಡಲಾಯಿತು.
ಬಳಿಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಯಾಗಿ ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಿರುವುದರಿಂದ ಸ್ಥಳೀಯವಾಗಿ ಉಂಟಾಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಸುರತ್ಕಲ್ ಟೋಲ್ ರದ್ದು ಮಾಡಿ ಅದರ ಶುಲ್ಕವನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಿ 2 ಟೋಲ್ ಶುಲ್ಕವನ್ನು ಒಂದೇ ಟೋಲ್ ಮೇಲೆ ಹೇರುವುದರಿಂದ ಉಡುಪಿ ಜಿಲ್ಲೆಯ ವಾಹನ ಸವಾರರು ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ. ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಟ್ಯಾಕ್ಸಿ ಅಥವಾ ಇತರ ವಾಹನಗಳು ಮುಲ್ಕಿಯಿಂದ ಕಿನ್ನಿಗೋಳಿ ಮುಖಾಂತರ ಹೋಗುತ್ತಿದ್ದರಿಂದ ಸುರತ್ಕಲ್ ಟೋಲ್ ಪಾವತಿಸುವ ಅವಶ್ಯಕತೆ ಇರಲಿಲ್ಲ. ಈಗ ಸುರತ್ಕಲ್ ಟೋಲ್ ಶುಲ್ಕ ಹೆಜಮಾಡಿ ಟೋಲ್ ಜತೆ ವಿಲೀನದಿಂದ ಮೂಲ್ಕಿಯಿಂದ ಕಿನ್ನಿಗೋಳಿ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಟ್ಯಾಕ್ಸಿ ಸೇರಿದಂತೆ ಇತರ ವಾಹನ ಸವಾರರು ಹೆಜಮಾಡಿ ಟೋಲ್ ನಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೆ ಸುರತ್ಕಲ್ ಟೋಲ್ ನಲ್ಲಿ ಸ್ಥಳೀಯ ವಾಣಿಜ್ಯ ಉದ್ದೇಶಕ್ಕೆ ಬಳಸುವ ವಾಹನಗಳಿಗೆ ಶೇ 50 ರಷ್ಟು ರಿಯಾಯಿತಿ ಇತ್ತು. ಅದನ್ನು ಈ ಟೋಲ್ ನಲ್ಲಿ ವಿಲೀನ ಮಾಡುವಾಗ ಪರಿಗಣಿಸಿದೆ ಇರುವ ಬಗ್ಗೆಯೂ ಮನವಿಯಲ್ಲಿ ತಿಳಿಸಿರುತ್ತಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಡಿ. 5 ರಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ಟೋಲ್ ದರ ಹೆಚ್ಚಳ ಮಾಡದಂತೆ ಶಾಸಕ ರಘುಪತಿ ಭಟ್ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರ ಆಪ್ತ ಕಾರ್ಯದರ್ಶಿ ಸಾಕತ್ ಸಿಂಗ್ ರಾಣಾವತ್ (ಐ.ಎಫ್.ಎಸ್), ಹೆಚ್ಚುವರಿ ಆಪ್ತ ಕಾರ್ಯದರ್ಶಿ ಮಂಜುನಾಥ್ ಗೌಡ ಹಾಗೂ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್ ಉಪಸ್ಥಿತರಿದ್ದರು