ನೇಕಾರರ ಹಾಗೂ ಮೀನುಗಾರರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉಡುಪಿ: ಈ ವರ್ಷ ನೇಕಾರರ ಹಾಗೂ ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆಯನ್ನು ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಶ್ರೀ ಕ್ಷೇತ್ರ ಉಚ್ಚಿಲ ಇವರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೀನುಗಾರಿಕೆಯನ್ನು ಲಾಭದಾಯಕವನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸಂಯೋಜಿಸಿ 100 ಆಳ ಸಮುದ್ರ ಮೀನುಗರಿಕಾ ದೋಣಿಗಳನ್ನು ಒದಗಿಸಲಾಗುವುದು. ರಾಜೀವ್ ಗಾಂದಿ ವಸತಿ ಯೋಜನೆಯಡಿ ಮೀನುಗಾರರಿಗೆ 5000 ಮನೆಗಳನ್ನು ನಿರ್ಮಿಸಲಾಗುವುದು. ಮೀನುಗಾರರ 8 ಬಂದರುಗಳಲ್ಲಿ ಹೂಳು ತೆಗೆಯುವ ಕೆಲಸವನ್ನು ಮಾಡಲಾಗುವುದು.

ಮೀನುಗಾರ ವೃತ್ತಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಪ್ರತಿ ಗ್ರಾಮಪಂಚಾಯತಿ ಕೆರೆಗಳಲ್ಲಿ ಮೀನುಗಾರರಿಗೆ ಕೆರೆಗಳನ್ನು ಮೀಸಲಿಟ್ಟು, ಮೀನಿನ ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಮಹಿಳಾ ಸಬಲೀಕರಣ:

ಸ್ತ್ರೀಶಕ್ತಿ ಸಂಘಗಳ ಸಾಲಗಳ ಮರುಪಾವತಿ ಶೇ.95 ರಷ್ಟಿದೆ. ಇದು ಮಹಿಳೆಯರ ಪರಿಶ್ರಮ ಹಾಗೂ ಪ್ರಮಾಣಿಕತೆಯನ್ನು ತೋರಿಸುತ್ತದೆ. ರಾಜ್ಯದ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. 500 ಕೋಟಿ ರೂ. ವೆಚ್ಚದಲ್ಲಿ ಆ್ಯಂಕರ್ ಬ್ಯಾಂಕ್ ಜೋಡಿಸಿ ಸ್ತ್ರೀ ಶಕ್ತಿ ಸಂಘಗಳಿಗೆ 1.5 ಲಕ್ಷ ರೂ.ಗಳಷ್ಟು ಸಾಲ ಸೌಲಭ್ಯ ನೀಡಲಾಗುವುದು. ಇದರಿಂದ ಸುಮಾರು 4 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ. ಕೇವಲ ಜೀವನೋಪಾಯಕ್ಕಾಗಿ ಅಲ್ಲ, ಆರ್ಥಿಕ ಅಭಿವೃದ್ಧಿ ಸಾಧಿಸುವ ಮೂಲಕ ವiಹಿಳಾ ಸಬಲೀಕರಣದ ಧ್ಯೇಯವನ್ನು ಸರ್ಕಾರ ಹೊಂದಿದೆ.

ಮೀನುಗಾರರಿಗೆ 10 ತಿಂಗಳ ಡೀಸೆಲ್ ಸಬ್ಸಿಡಿ :

100 ಡಾ. ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುವುದು. ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 1000 ಹಾಸ್ಟೆಲ್‍ಗಳ ಕ್ಲಸ್ಟರ್ ನಿರ್ಮಿಸಲಾಗುವುದು. ಮೊಗವೀರ ಸಮುದಾಯದ ಮಕ್ಕಳಿಗೆ ವಸತಿ ನಿಲಯ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪೂರೈಸಲಾಗುವುದು. ಮೀನುಗಾರರಿಗೆ 10 ತಿಂಗಳಿಗೆ ಬೇಕಾಗುವ ಡೀಸೆಲ್ ವೆಚ್ಚವನ್ನು ಸಂಪೂರ್ಣವಾಗಿ ಸಬ್ಸಿಡಿ ನೀಡಲಾಗುವುದು. ಮೊಗವೀರರ ಮಹಾಸಂಘ ಕೋರಿರುವಂತೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ 5 ಕೋಟಿ ರೂ.ಗಳನ್ನು ಮುಜರಾಯಿ ಇಲಾಖೆ ಮೂಲಕ ನೀಡಲಾಗುವುದು. ಮೀನುಗಾರರ ದುಡಿಮೆ, ಸಾಹಸಗಳನ್ನು ಪ್ರೋತ್ಸಾಹಿಸಿ ಅವರ ಒಳಿತಿಗಾಗಿ ಸರ್ಕಾರ ಸದಾ ಸ್ಪಂದಿಸುತ್ತದೆ ಎಂದರು.

ಸಮಸ್ಯೆಗೆ ಪರಿಹಾರ ಒದಗಿಸುವ ಚಿಂತನೆ ನಾಯಕನಿಗಿರಬೇಕು. ಕೋವಿಡ್ ಸೇರಿದಂತೆ ಯಾವುದೇ ಸಂಕಷ್ಟದ ಸಮಯದಲ್ಲಿನ ಸ್ಪಂದನೆಯಿಂದ ಸರ್ಕಾರದ ಜೀವಂತಿಕೆ ನಿರೂಪಿತವಾಗುತ್ತದೆ.

ಕೋವಿಡ್ ಅಲೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಆರ್ಥಿಕತೆಯ ಅಭಿವೃದ್ಧಿಗಾಗಿ ಶ್ರಮವಹಿಸಿ ಸುಮಾರು 15 ಸಾವಿರ ಕೋಟಿಗೂ ಮೀರಿದ ಆರ್ಥಿಕತೆಯನ್ನು ಸರ್ಕಾರ ತಲುಪಿದೆ. ರೈತರಿಗೆ ಡೀಸೆಲ್ ವೆಚ್ಚ,. ಕೋವಿಡ್ ಪ್ರಾಣಕಳೆದುಕೊಂಡವರಿಗೆ ಪರಿಹಾರ, ಪ್ರವಾಹದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರಗಳನ್ನು ನೀಡಲಾಗಿದೆ ಎಂದರು.