ಸಿ.ಆರ್.ಝೆಡ್ ವಿಸ್ತರಣೆಯಿಂದ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಬೊಮ್ಮಾಯಿ

ನವದೆಹಲಿ: ಕರಾವಳಿ ನಿಯಂತ್ರಣಾ ವಲಯ ವಿಸ್ತರಣೆಯನ್ನು ರಾಜ್ಯದ ಕರಾವಳಿ ಪ್ರದೇಶಗಳಿಗೂ ಪಡೆಯಲು ಚೆನ್ನೈನ ಪ್ರಾದೇಶಿಕ ಕಚೇರಿಯಿಂದ ಅನುಮತಿ ದೊರೆತಿದ್ದು, ಇದರಿಂದ ಕರಾವಳಿ ಪ್ರದೇಶ ಅಭಿವೃದ್ಧಿಗೊಳ್ಳಲಿದೆ. ಗೋವಾ ಹಾಗೂ ಕೇರಳಗಳಲ್ಲಿ ಕರಾವಳಿ ನಿಯಂತ್ರಣಾ ವಲಯ ( ಸಿ ಆರ್ ಝೆಡ್ ) ವಿಸ್ತರಣೆಗೆ ಅನುಮತಿ ನೀಡಿರುವುದರಿಂದ ಹೋಟೆಲ್ ಉದ್ಯಮ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಿದೆ. ಇದೇ ರೀತಿ ರಾಜ್ಯದ ಕರಾವಳಿ ಪ್ರದೇಶಗಳಿಗೂ ಸಿ ಆರ್ ಝೆಡ್ ವಿಸ್ತರಣೆ ಪಡೆಯಲು ಗಂಭೀರ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಚೆನ್ನೈನ ಪ್ರಾದೇಶಿಕ ಕಚೇರಿಯಿಂದ ಅನುಮತಿ ದೊರೆತಿದೆ. ಇದರಿಂದ ಕರ್ನಾಟಕದ 330 ಕಿ.ಮೀ. ಉದ್ದದ ಕರಾವಳಿ ಪ್ರದೇಶದ ಅಭಿವೃದ್ಧಿಯ ಜೊತೆಗೆ ಆರ್ಥಿಕತೆ, ಪ್ರವಾಸೋದ್ಯಮ, ಮೀನುಗಾರಿಕೆ ಸೇರಿದಂತೆ ಕರಾವಳಿ ಭಾಗದ ಚಟುವಟಿಕೆಗಳು ವೇಗ ಪಡೆದುಕೊಳ್ಳಲಿವೆ. ರಾಜ್ಯದ ಯೋಜನೆಗಳಿಗೆ ಶೀಘ್ರ ಮಂಜೂರಾತಿ ಪಡೆಯಲು ಕೇಂದ್ರ ಸಚಿವರೊಂದಿಗೆ ಮುಖತಃ ಭೇಟಿಯಾಗಲಿರುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಾಕಿ ಇರುವ ಪ್ರಸ್ತಾವನೆಗಳ ಮಂಜೂರಾತಿ ಬಗ್ಗೆ ಕೇಂದ್ರ ಬಂದರು ಮತ್ತು ಜಲಸಾರಿಗೆ ಸಚಿವರ ಜೊತೆ ಚರ್ಚಿಸಲಾಗಿದೆ. ಸಾಗರಮಾಲಾ ಯೋಜನೆಯಡಿ ಸುಮಾರು 1800 ಕೋಟಿ ರೂ.ಗಳ ಒಟ್ಟು 27 ಯೋಜನೆಯ ಪ್ರಸ್ತಾವನೆಗಳ ಪೈಕಿ 10 ಯೋಜನೆಗಳಿಗೆ ಈಗಾಗಲೇ ಮಂಜೂರಾತಿಯನ್ನು ನೀಡಲಾಗಿದೆ.

10 ಯೋಜನೆಗಳಿಗೆ ಸ್ಪಷ್ಟೀಕರಣ ಕೇಳಲಾಗಿದ್ದು, ಅವುಗಳನ್ನು ನೀಡಲಾಗಿದೆ. ಕೆಲವು ಪ್ರಸ್ತಾವನೆಗಳನ್ನು ಬದಲಾವಣೆ ಮಾಡಿ ಕಳುಹಿಸಲು ಸೂಚಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ 250 ಕೋಟಿ ರೂ.ಗಳ ಮಜಾಲಿ ಮೀನುಗಾರಿಕೆ ಬಂದರು, ಮ್ಯಾರಿಟೈಮ್ ಮೀನುಗಾರಿಕಾ ತರಬೇತಿ ಸಂಸ್ಥೆಯ ಉದ್ದೇಶ ಮತ್ತು ಹೆಸರು ಬದಲಾಯಿಸುವುದಾಗಿ ತಿಳಿಸಿದ್ದಾರೆ. ಕಾಳಿ ವಾಟರ್ ವೇ ಡಿಪಿಆರ್ ಕಳುಹಿಸಿದ ಕೂಡಲೇ ಮಂಜೂರಾತಿ ಆಗಲಿದೆ. ಅಂಗರಘಟ್ಟದಿಂದ ಮಣಿಪಾಲ ವಾಟರ್ ವೇ ಯೋಜನೆಯ ಸಮೀಕ್ಷೆ ಹಾಗೂ ಡಿಪಿಆರ್ ಸಿದ್ಧವಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪ್ರಸ್ತಾವನೆಗೆ ಮಂಜೂರಾತಿ ನೀಡುವುದಾಗಿ ತಿಳಿಸಿದ್ದಾರೆ.

ಬೈಂದೂರು, ಮಲ್ಪೆ ಹಾಗೂ ಮಂಗಳೂರು ಮರೀನಾಗಳಲ್ಲಿ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಕಾರ್ಯಸಾಧ್ಯತಾ ನಿಧಿಯನ್ನು ನೀಡಲಾಗುವುದು.
ಚಟುವಟಿಕೆಗಳನ್ನು ಪಿಪಿಪಿ ಮಾದರಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ್ದು, ಅದರಂತೆ 8-10 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಈ ಬಗ್ಗೆ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ತಜ್ಞರ ಬಳಿ ಸಮಾಲೋಚನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.