ಮೇ 1, 1932 ರಲ್ಲಿ ಏಳು ಹೆಣ್ಣು ಮಕ್ಕಳ ನಂತರ ಎಂಟನೆಯವರಾಗಿ ಜನಿಸಿದವರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (SM Krishna) ತಮ್ಮ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು ಪೂರೈಸಿದ್ದರು. ಬಾಲ್ಯದಲ್ಲಿ ತುಂಟ ಕೃಷ್ಣನಾಗಿದ್ದ ಇವರು ಗುರುಗಳಿಂದ ಸದಾ ಶಿಕ್ಷೆ, ಪೆಟ್ಟುಗಳನ್ನು ಪಡೆಯುತ್ತಿದ್ದರಂತೆ. ಅಲ್ಲಿನ ಸಂಸ್ಕಾರಗಳೇ ಅವರ ಜೀವನ ಈ ಮಟ್ಟದಲ್ಲಿ ಬೆಳೆಯಲು ಕಾರಣ ಎಂದು ಹೇಳಬಹುದು.
ಪಠ್ಯ ಚಟುವಟಿಕೆಗಳ ಜೊತೆಯಲ್ಲಿ, ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲೂ ಇವರು ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು. ಪ್ರೌಢಶಾಲಾ ದಿನಗಳಲ್ಲೂ ಎಸ್.ಎಂ.ಕೃಷ್ಣ ಇದ್ರೆ ಚರ್ಚಾಸ್ಪರ್ಧೆಯಲ್ಲಿ ಅವರಿಗೇ ಗೆಲುವು ಅಂತ ಇಡೀ ಮೈಸೂರಿನಲ್ಲಿ ಹೆಸರು ಗಳಿಸಿದ್ದರು. ಇವರು ವೈದ್ಯರಾಗಬೇಕೆಂದು ತಂದೆಯವರ ಕನಸಿತ್ತಂತೆ, ಆದರೆ ತಮ್ಮ ಆಸಕ್ತಿಯ ಕ್ಷೇತ್ರವಾದ ರಾಜಕೀಯ ಹಾಗೂ ಅರ್ಥಶಾಸ್ತ್ರದಲ್ಲಿ ಪದವಿ ಮಾಡುತ್ತೇನೆಂದಾಗ ತಂದೆಯವರು ತುಂಬು ಮನಸ್ಸಿನಿಂದ ಸಮ್ಮತಿ ಸೂಚಿಸಿದರು.
ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಮತ್ತು ಎಸ್.ಎಂ.ಕೃಷ್ಣರವರು ಒಂದೇ ಸಮಯದಲ್ಲಿ ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪದವಿ ಓದುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನಲ್ಲಿ ಯೂನಿಯನ್ ಸೆಕ್ರೆಟರಿ ಚುನಾವಣೆಗೆ ಸ್ಪರ್ಧಿಸಿ ಸೋತರೂ 125 ಹೆಣ್ಣುಮಕ್ಕಳಲ್ಲಿ 105 ಜನರ ಓಟು ಪಡೆದು ಸಂಭ್ರಮಪಟ್ಟಿದ್ದರಂತೆ ಎಸ್.ಎಂ.ಕೃಷ್ಣರವರು.
ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಅವರು ಮನೆಯಿಂದ ದೂರ ಇದ್ದ ಸಂದರ್ಭದಲ್ಲಿ ತಂದೆಯವರೊಂದಿಗೆ ಇಂಗ್ಲಿಷ್ ನಲ್ಲಿ ಪತ್ರ ವ್ಯವಹಾರ ಮಾಡುತ್ತಿದ್ದರು. ಹಾಗೆಯೇ ಇವರಿಗೆ ವಿದೇಶಕ್ಕೆ ಹೋಗಿ ಕಾನೂನು ಶಿಕ್ಷಣ ಪಡೆಯಬೇಕೆಂಬ ಹಂಬಲವಿತ್ತು. ಆದರೆ ಅದೇ ಸಂದರ್ಭದಲ್ಲಿ ತಂದೆಯವರಿಗೆ ಅನಾರೋಗ್ಯ ಉಂಟಾದುದರಿಂದ ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲೇ ಪೂರೈಸಿದರು.
ರಾಜಕೀಯ ಜೀವನದಲ್ಲೂ ಹಲವು ಸಾಧನೆಗಳಿಗೆ ನಾಂದಿ ಹಾಡಿದ ಇವರು ರಾಜ್ಯದ ಮೊದಲ ಉಪಮುಖ್ಯ ಮಂತ್ರಿ. ಅಮೇರಿಕಾದಲ್ಲಿ ಶಿಕ್ಷಣ ಪಡೆದು ಬಂದಿದ್ದರಿಂದ ಆಡಳಿತದಲ್ಲೂ ಒಂದಷ್ಟು ತಂತ್ರಜ್ಞಾನದ ಬಳಕೆಗೆ ಇಂಬು ನೀಡಿದರು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ವತಃ ಶಿಕ್ಷಕರನ್ನು ನೇಮಿಸಿಕೊಂಡು ಪ್ರತಿದಿನ ಕಂಪ್ಯೂಟರ್ ಕಲಿಯುತ್ತಿದ್ದರು. ರಾಜ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೂ ಇವರ ಕೊಡುಗೆ ಅಪಾರ.
ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ, ಬಿಸಿಯೂಟದ ಯೋಜನೆ, ಸ್ತ್ರೀಶಕ್ತಿ ಸಂಘಗಳು, ಯಶಸ್ವಿನಿ ಆರೋಗ್ಯ ವಿಮೆ ಇವೆಲ್ಲವೂ ಇವರ ಕೊಡುಗೆ.
2011 ರಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರು ನಗೆಪಾಟಲಿಗೆ ಗುರಿಯಾದ ಸಂದರ್ಭ ಬಂದೊದಗಿತ್ತು. ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವಾಗ ಭಾರತದ ಬದಲಿಗೆ ಪೋರ್ಚುಗೀಸ್ ನ ಭಾಷಣ ಓದಿ ಎಲ್ಲರ ಕೆಂಗಣ್ಣಿಗೆ ಗುರಿಯಾದರು. ಆಗ ಅವರಿಗೆ 80 ವರ್ಷ ವಯಸ್ಸಾಗಿತ್ತು. ಆಗ ಕಾಂಗ್ರೆಸ್ ಅವರಿಗೆ ರಾಜಕೀಯ ನಿವೃತ್ತಿಯನ್ನು ನೀಡಿ ಮನೆಗೆ ಕಳಿಸಿತು. 2018 ರಲ್ಲಿ ಆಶ್ಚರ್ಯಕರವಾಗಿ ಬಿಜೆಪಿಗೆ ಸೇರಿದರು.
ಎಸ್.ಎಂ.ಕೃಷ್ಣ ಅವರ ಆತ್ಮಚರಿತ್ರೆ ಸ್ಮೃತಿ ವಾಹಿನಿಯಲ್ಲಿ ಅವರು ತಮ್ಮ ಎಲ್ಲಾ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.