ಮುಂಬೈ : ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ದಿಢೀರನೇ ಏರಿಕೆ ಮಾಡಿದ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಫ್ಯೂಚರ್ಸ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದರಿಂದ ಆಭರಣ ಪ್ರಿಯರು ಹಾಗೂ ಹೂಡಿಕೆದಾರರಿಗೆ ಶಾಕ್ ಎದುರಾಗಿದೆ.
ಬೆಳಗ್ಗೆ 9:45ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 8,838 ರೂ. (ಶೇ.5.66) ಏರಿಕೆಯಾಗಿ 1,61,887 ರೂ. ತಲುಪಿದರೆ, 1 ಕೆಜಿ ಬೆಳ್ಳಿಯ ದರ 1,80,920 ರೂ. (ಶೇ.6.36) ಹೆಚ್ಚಾಗಿ 2,98,400 ರೂ.ನಲ್ಲಿ ವ್ಯವಹಾರ ನಡೆಯಿತು. ಮಧ್ಯಾಹ್ನದ ವೇಳೆಗೆ ದರದಲ್ಲಿ ಮತ್ತಷ್ಟು ಏರಿಳಿತ ಕಂಡುಬರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎಂಸಿಎಕ್ಸ್‌ನಲ್ಲಿ ನಡೆಯುವ ಚಿನ್ನದ ವ್ಯವಹಾರವು ಭೌತಿಕ ಚಿನ್ನದ ಖರೀದಿ-ಮಾರಾಟಕ್ಕಿಂತ ವಿಭಿನ್ನವಾಗಿದೆ. ಇಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಫ್ಯೂಚರ್ಸ್ ಒಪ್ಪಂದಗಳ ಮೂಲಕ ವ್ಯಾಪಾರ ಮಾಡಲಾಗುತ್ತದೆ. ಅಂದರೆ, ಭವಿಷ್ಯದ ನಿಗದಿತ ದಿನಾಂಕದಲ್ಲಿ ಪೂರ್ವನಿಗದಿತ ಬೆಲೆಯಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ಜಾಗತಿಕ ರಾಜಕೀಯ ಬೆಳವಣಿಗೆಗಳು, ಆರ್ಥಿಕ ಪರಿಸ್ಥಿತಿಗಳು, ಡಾಲರ್ ಮೌಲ್ಯ ಹಾಗೂ ಆಮದು ನೀತಿಗಳ ಬದಲಾವಣೆಗಳ ಆಧಾರದ ಮೇಲೆ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ದರಗಳು ತೀವ್ರ ಏರಿಳಿತ ಕಾಣುವುದು ಸಾಮಾನ್ಯವಾಗಿದೆ. ಹೊಸ ಆಮದು ಸುಂಕ ಹೆಚ್ಚಳದಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.

















