ಉಡುಪಿ: ಪ್ರತಿನಿತ್ಯ ಉಪಯೋಗಿಸುವ ಆಹಾರದಲ್ಲಿ ರಾಸಾಯನಿಕ ವಸ್ತುಗಳ ಹೆಚ್ಚಿನ ಬಳಕೆಯಿಂದ ಕ್ಯಾನ್ಸರ್, ಕಿಡ್ನಿರೋಗದಂತಹ ಮಾರಕ ಕಾಯಿಲೆಗಳು ಕಂಡುಬರುತ್ತಿದ್ದು, ಸಾರ್ವಜನಿಕರು ತಮ್ಮ ಆರೋಗ್ಯದ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಉಡುಪಿ, ಜಿಲ್ಲಾ ಆಯುಷ್ ವಿಭಾಗ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ರೋಟರಿ ಮಿಡ್ ಟೌನ್, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ, 75 ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ, ಉಡುಪಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಬೃಹತ್ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ದೈನಂದಿನ ಬದುಕಿನ ಒತ್ತಡಗಳು ಹಾಗೂ ಬದಲಾದ ಜೀವನ ಶೈಲಿಯಿಂದ ಅನೇಕ ರೋಗಗಳು ಕಾಡುತ್ತಿದ್ದು, ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ದೊರೆಯಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದಾದ್ಯಂತ ನಡೆಯುವ ಆರೋಗ್ಯ ಸಪ್ತಾಹದ ಮೂಲಕ ಸಾರ್ವಜನಿಕರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಸೇವೆಗಳನ್ನು ಒಂದೇ ಸೂರಿನಡಿ
ನೀಡುವ ಉದ್ದೇಶದಿಂದ ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಅವುಗಳ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಬೇಕು ಎನ್ನುವುದು ಮಾನ್ಯ ಪ್ರಧಾನಿಗಳ ಆಶಯವಾಗಿದೆ ಎಂದರು.
ಆಯುಷ್ಮಾನ್ ಆರೋಗ್ಯ ಕಾರ್ಡ್ ಯೋಜನೆಯ ಮೂಲಕ ನಿಗದಿತ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು, ಕೇಂದ್ರ ಸರ್ಕಾರವು ಆಯುಷ್ ಚಿಕಿತ್ಸೆಯ ಬಗ್ಗೆ ಸಹ ಒತ್ತು ನೀಡಿದೆ. ಉಡುಪಿ ಜಿಲ್ಲೆಯಲ್ಲಿನ ವಿಕಲಚೇತನರಿಗೆ ಕೇಂದ್ರ ಸರ್ಕಾರದ ಎಲಿಮ್ಕೋ ವತಿಯಿಂದ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿಯಲ್ಲಿ 150 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, 200 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನೂ ಸಹ ಸರ್ಕಾರದ ಸುರ್ಪದಿಗೆ
ಪಡೆಯಲಾಗುತ್ತಿದೆ, ಉಡುಪಿಯಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದ ಬಗ್ಗೆ ಡಿಪಿಆರ್ ತಯಾರಿ ನಡೆಯುತ್ತಿದೆ. ಡಿಪಿಆರ್ ಪೂರ್ಣಗೊಂಡ ನಂತರ , ಜಿಲ್ಲೆಯ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ಗ್ಲೋಬಲ್ ಟೆಂಡರ್ ಮೂಲಕ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು , ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆಯ ಮೂಲಕ ಜಿಲ್ಲೆಯ ಜನತೆಗೆ ಎಲ್ಲಾ ರೀತಿಯ ಉತ್ತಮ ಆರೋಗ್ಯ
ಸೇವೆ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ , ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್, ಸದಸ್ಯೆ ಲಕ್ಷ್ಮಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ , ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸತೀಶ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ಹಾಗೂ ಯು.ಡಿ.ಐ.ಡಿ ಗಳನ್ನು ವಿತರಿಸಲಾಯಿತು.
ಆರೋಗ್ಯ ಮೇಳದಲ್ಲಿ 20 ಕ್ಕೂ ಅಧಿಕ ಉಚಿತ ವೈದ್ಯಕೀಯ ಸೇವೆಗಳು ಮತ್ತು ಯೋಜನೆಗಳ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಸ್ವಾಗತಿಸಿದರು. ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ವಂದಿಸಿದರು.