ವಿವಿಧ ಪಂದ್ಯಾಟಗಳಲ್ಲಿ ಜ್ಞಾನಸುಧಾ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್‌ ಇದರ ಜಂಟಿ ಆಶ್ರಯದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ವಾಲಿಬಾಲ್‌ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಬಾಲಕಿಯರ ತಂಡ ರನ್ನರ್‌ ಅಪ್‌ ಪ್ರಶಸ್ತಿ ಗಳಿಸಿ ಕೊಂಡಿದೆ. ತಂಡದ ನಾಯಕಿ ಮಾನ್ಯಶ್ರೀಗೆ ಪಂದ್ಯದ ಬೆಸ್ಟ್‌ ಅಟ್ಯಾಕರ್‌ ಪ್ರಶಸ್ತಿ ದೊರಕಿದೆ. ಜೊತೆಗೆ ಮಾನ್ಯಶ್ರೀ, ಖುಷಿ ಶೆಟ್ಟಿ, ಮತ್ತು ವರ್ಷ ಅಥಣಿ ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್‌ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾರೆ. ತಂಡದೊಂದಿಗೆ ಕಾಲೇಜಿನ ಪ್ರಾಂಶುಪಾಲ ದಿನೇಶ್‌.ಎಂ.ಕೊಡವೂರ್, ಉಪಪ್ರಾಂಶುಪಾಲ ಸಾಹಿತ್ಯ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ಉಪಸ್ಥಿತರಿದ್ದರು.

ಹ್ಯಾಂಡ್‌ ಬಾಲ್‌ ಪಂದ್ಯಾಟದಲ್ಲಿ ಪ್ರಜ್ವಲ್‌ ರೆಡ್ಡಿ ರಾಜ್ಯಮಟ್ಟಕ್ಕೆ ಆಯ್ಕೆ

ಪದವಿ ಪೂರ್ವಶಿಕ್ಷಣ ಇಲಾಖೆ ಹಾಗೂ ಪೂರ್ಣ ಪ್ರಜ್ಞಾ ಪಿಯು ಕಾಲೇಜು ಉಡುಪಿ ಇದರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಹ್ಯಾಂಡ್‌ ಬಾಲ್‌ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ಬಾಲಕರ ತಂಡವು ಭಾಗವಹಿಸಿ, ತಂಡದ ದ್ವಿತೀಯ ವಿಜ್ಙಾನ ವಿಭಾಗದ ವಿದ್ಯಾರ್ಥಿ ಪ್ರಜ್ವಲ್‌ ರೆಡ್ಡಿ ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಹ್ಯಾಂಡ್‌ ಬಾಲ್‌ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ತ್ರೋಬಾಲ್‌ ಪಂದ್ಯಾಟದಲ್ಲಿ ಸ್ವಾತಿ ಶೆಟ್ಟಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ದೊಡ್ಡಾಬಳ್ಳಾಪುರದಲ್ಲಿ ನಡೆದ ರಾಜ್ಯಮಟ್ಟದ ತ್ರೋಬಾಲ್‌ ಪಂದ್ಯಾಟದಲ್ಲಿ, ಉಡುಪಿ ಜಿಲ್ಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನ ಗಳಿಸಿದ್ದು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು.ಸ್ವಾತಿ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಈಕೆ ಅರವಿಂದ ಶೆಟ್ಟಿ ಮತ್ತು ವೇದಾವತಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಕಲಿಕೆಯಲ್ಲೂ ಪ್ರತಿಭಾನ್ವಿತೆಯಾಗಿದ್ದು ಕಾಲೇಜಿನ ಎನ್.ಎಸ್.ಎಸ್‌ನ ಬಾಲಕಿಯರ ತಂಡದ ನಾಯಕಿಯು ಆಗಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆಯವರು ಮಾರ್ಗದರ್ಶನ ನೀಡಿರುತ್ತಾರೆ.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಡಾ.ಸುಧಾಕರ್‌ ಶೆಟ್ಟಿಯವರು ಅಭಿನಂದಿಸಿದ್ದು, ಆಡಳಿತ ಮಂಡಳಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.