ಬೆಂಗಳೂರು: ಬಹು ನಿರೀಕ್ಷಿತ ಪಿಜಿ ಸಿಇಟಿ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕದಲ್ಲಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ 2023ನೇ ಸಾಲಿನ ಪದವಿ ಕೋರ್ಸ್ಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಪೂರ್ಣಗೊಳ್ಳದೇ ಇರುವುದರಿಂದ ಮತ್ತು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪಿಜಿಸಿಇಟಿ-2023 ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂ-ಆರ್ಕಿಟೆಕ್ಚರ್ ಕೋರ್ಸ್ಗಳ ಪ್ರವೇಶಕ್ಕಾಗಿ ಪಿಜಿಸಿಇಟಿ-2023ರ ಪರೀಕ್ಷೆಯನ್ನು ಸೆಪ್ಟೆಂಬರ್ 23 ಮತ್ತು 24 ರಂದು ಪರಿಷ್ಕೃತ ವೇಳಾಪಟ್ಟಿಯಂತೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ.
ಸೆಪ್ಟಂಬರ್ 9 ಮತ್ತು 10 ರಂದು ನಡೆಯಬೇಕಿದ್ದ ಪಿಜಿಸಿಇಟಿ-2023 ಪರೀಕ್ಷೆಯನ್ನು ಸೆಪ್ಟೆಂಬರ್ 23 ಮತ್ತು 24 ರಂದು ನಿಗದಿಪಡಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂದು ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಿಜಿಸಿಇಟಿ 2023 ಪರೀಕ್ಷೆಯನ್ನು ಸೆಪ್ಟೆಂಬರ್ 23 ಮತ್ತು 24 ರಂದು ನಿಗದಿಪಡಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಪಿಜಿ ಪ್ರವೇಶಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: 2023ನೇ ಸಾಲಿನ ಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂ-ಆರ್ಕಿಟೆಕ್ಚರ್ ಕೋರ್ಸ್ಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅಂತಿಮ ಅವಕಾಶವನ್ನು ಸೆಪ್ಟೆಂಬರ್ 1ರ ರಾತ್ರಿ 11:59ರ ವರೆಗೆ ವಿಸ್ತರಣೆ ಮಾಡಲಾಗಿದೆ. ಇಲ್ಲಿಯವರೆಗೆ ಪಿಜಿಸಿಇಟಿ-2023ಕ್ಕೆ ನೋಂದಣಿ ಮಾಡದೇ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿಯನ್ನು ಸಲ್ಲಿಸಿ ಶುಲ್ಕವನ್ನು ಪಾವತಿಸಬಹುದಾಗಿದೆ. ಅರ್ಜಿ ಸಲ್ಲಿಸುವಿಕೆ ಮತ್ತು ವಿವಿಧ ಕೋರ್ಸ್ಗಳಿಗೆ ನಿಗದಿಪಡಿಸಿರುವ ಅರ್ಹತೆಯ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ www.kea.kar.nic.in ಅನ್ನು ನೋಡುವಂತೆ ಸೂಚಿಸಿದ್ದು, ಅರ್ಜಿ ಸಲ್ಲಿಸಲು ಮತ್ತೊಮ್ಮೆ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಮೂಲಕ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 23ರ ಶನಿವಾರ 100 ಅಂಕಗಳಿಗೆ ಎಂ.ಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಪರೀಕ್ಷೆಗಳು ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ ನಡೆಯಲಿವೆ. ಸೆಪ್ಟೆಂಬರ್ 24 ರಂದು ಎಂಸಿಎ ಮೊದಲ ವರ್ಷದ ಮೊದಲ ಸೆಮಿಸ್ಟರ್ 100 ಅಂಕಗಳಿಗೆ ಬೆಳಗ್ಗೆ 10.30 ರಿಂದ ಅಪರಾಹ್ನ 12.30ರ ವರೆಗೆ ಮತ್ತು ಎಂಬಿಎ ಮೊದಲ ವರ್ಷದ ಮೊದಲ ಸೆಮಿಸ್ಟರ್ 100 ಅಂಕಗಳಿಗೆ ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಮಾಹಿತಿ ನೀಡಿದ್ದಾರೆ.