ಕುಂದಾಪುರ: ಭೀಕರ ಪ್ರವಾಹ ಬಂದು ಜನರೆಲ್ಲರೂ ಸಂಕಷ್ಟಕ್ಕೆ ಸಿಲುಕಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೂತಾನ್ ಪ್ರವಾಸ ಕೈಗೊಂಡಿದ್ದಾರೆ. ಭೂತಾನ್ ಮಕ್ಕಳಿಗೆ ಬೆನ್ನು ತಟ್ಟುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕಣ್ಣೀರೊರೆಸುವ ಕೆಲಸ ಮಾಡಬೇಕಿತ್ತು. ನಿಜವಾಗಿಯೂ ಕೇಂದ್ರ ಸರ್ಕಾರಕ್ಕೆ ನೆರೆ ಸಂತ್ರಸ್ತ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ್ ರೈ ವಾಗ್ದಾಳಿ ನಡೆಸಿದರು.
ಅವರು ತಾಲೂಕಿನಲ್ಲಿ ನೆರೆಯಿಂದುಂಟಾದ ಹಾನಿಗಳ ಬಗ್ಗೆ ಕುಂದಾಪುರ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ವರದಿ ಸ್ವೀಕರಿಸಿದ ಬಳಿಕ ಕುಂದಾಪುರದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಈಗಾಗಲೇ ರಾಜ್ಯದ ಹಲವೆಡೆ ತೀವ್ರ ಪ್ರವಾಹದಿಂದಾಗಿ ಹಲವು ಕುಟುಂಬಗಳು ಕಷ್ಟದಲ್ಲಿವೆ. ಮುಖ್ಯವಾಗಿ ಬೆಳ್ತಂಗಡಿ ತಾಲೂಕು ನೆರೆಪ್ರವಾಹದಿಂದಾಗಿ ಸಂಪೂರ್ಣ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ನೆರೆಪೀಡಿತರ ಕಣ್ಣೀರು ಒರೆಸಬೇಕಾದ ರಾಜ್ಯ ಸರ್ಕಾರ ಏನೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಒಂದು ಬಾರಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತುರ್ತು ಪರಿಹಾರವನ್ನು ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಇದುವರೆಗೂ ಕೆಲ ನೆರೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಹಣ ತಲುಪಿಲ್ಲ. ನೆರೆಪೀಡಿತರ ಪರವಾಗಿ ಕಾಂಗ್ರೆಸ್ ಪಕ್ಷ ಇದೆ ಎಂಬುವುದರ ಮೂಲಕ ನಾವು ಸಮಿತಿಯನ್ನು ಮಾಡಿಕೊಂಡು ಜನರ ಕಷ್ಟಗಳನ್ನು ಕಣ್ಣಾರೆ ನೋಡಿ ಸರ್ಕಾರದ ಗಮನ ಸೆಳೆಯಲಿದ್ದೇವೆ ಎಂದರು.
ಸಿಎಂ ಹೊರಡಿಸಿದ ಘೋಷಣೆಗಳು ಅನುಷ್ಠಾನಗೊಂಡಿಲ್ಲ:
ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಳ್ತಂಗಡಿಗೆ ಭೇಟಿ ನೀಡಿದಾಗ ನೆರೆಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದ್ದರು. ಸಿಎಂ ಹೊರಡಿಸಿರುವ ಘೋಷಣೆಗಳು ಕೆಲವು ಕಡೆ ಇನ್ನೂ ಅನುಷ್ಠನಗೊಂಡಿಲ್ಲ. ತೊಂದರೆಗೊಳಗಾದವರಿಗೆ ೧೦,೦೦೦ ಹಣವನ್ನು ಕೊಡುವಂತೆ ಸೂಚನೆ ನೀಡಿದ್ದಾರೆ. ಆದರೆ ನಮ್ಮ ಸಮಿತಿ ಭೇಟಿ ಕೊಟ್ಟ ಕಡೆಗಳಲ್ಲೆಲ್ಲಾ ೨,೦೦೦-೩,೦೦೦ ಹಣವನ್ನು ಮಾತ್ರ ಕೊಟ್ಟಿದ್ದಾರೆ. ಸರ್ಕಾರ ನೆರೆ ಸಂತ್ರಸ್ತರ ಕಡೆ ಗಮನ ಹರಿಸುತ್ತಿಲ್ಲ ಎಂದು ರಮನಾಥ ರೈ ಆರೋಪಿಸಿದರು.
ಕೋಟ ಹಾಗೂ ಕುಂದಾಫುರ ಬ್ಲಾಕ್ ಸಮಿತಿಯ ವ್ಯಾಪ್ತಿಯಲ್ಲಿ ಸುಮಾರು ೩೦ ಲಕ್ಷದಷ್ಟು ನೆರೆಯಿಂದಾಗಿ ಹಾನಿ ಸಂಭವಿಸಿದೆ. ಸರ್ಕಾರ ಘೋಷಣೆ ಮಾಡಿರುವಂತಹ ಪರಿಹಾರ ಹಣವನ್ನು ಕೂಡಲೇ ವಿತರಿಸಬೇಕು. ಶಾಶ್ವತವಾಗಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ರಮನಾಥ್ ರೈ ಆಗ್ರಹಿಸಿದರು.
ಸಿಎಂ ಆದೇಶಕ್ಕೆ ಬೆಲೆ ಇಲ್ಲವಾ: ಸೊರಕೆ ಪ್ರಶ್ನೆ:
ಒಂದೇ ಒಂದು ನೆರೆ ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿ ಘೋಷಣೆ ಮಾಡಿರುವ ಹತ್ತುಸಾವಿರ ರೂಪಾಯಿಗಳು ತಲುಪಿಲ್ಲ. ಮುಖ್ಯಂತ್ರಿಗಳ ಆದೇಶಕ್ಕೆ ಬೆಲೆ ಇಲ್ವ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರಶ್ನಿಸಿದ್ದಾರೆ. ಜಮೀನು ಕಳೆದುಕೊಂಡಿದ್ದಾರೆ. ಅಡಿಕೆ, ತೆಂಗು, ಭತ್ತದ ಕೃಷಿ ಸಂಪೂರ್ಣ ನಾಶವಾಗಿದೆ. ಕೃಷಿ ನಾಶವಾಗಿರುವ ಬಗ್ಗೆ ಕೃಷಿ ಇಲಾಖೆಗಳ ಮೂಲಕ ಸರ್ವೇ ಕಾರ್ಯ ನಡೆಸಬೇಕಿತ್ತು. ಈ ಹಂತದಲ್ಲಿ ಸರ್ಕಾರವು ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಬೇಕಿತ್ತುಎಂದು ಸೊರಕೆ ಹೇಳಿದರು.
ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಮಾಣಿಗೋಪಾಲ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆನಂದ ಕುಂದರ್, ಕೊಳ್ಕಿಬೈಲ್ ಕಿಶನ್ ಹೆಗ್ಡೆ, ದೇವಾನಂದ ಶೆಟ್ಟಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ದೇವಕಿ ಸಣ್ಣಯ್ಯ, ಯುವ ಕಾಂಗ್ರೆಸ್‌ನ ಇಚ್ಛಿತಾರ್ಥ್ ಶೆಟ್ಟಿ ಮೊದಲಾದವರು ಇದ್ದರು.












