ಬೆಂಡೆಕಾಯಿ, ಮೆಣಸಿನಕಾಯಿ, ಕ್ಯಾಪ್ಸಿಕಂ, ಸೋರೆಕಾಯಿ, ಟೊಮೆಟೊ, ಹೂಕೋಸು, ಪಾಲಕ್, ಎಲೆಕೋಸು, ಸ್ಟ್ರಾಬೆರಿ, ಮೆಂತ್ಯ ಮತ್ತು ಹಸಿರು ಬಟಾಣಿ….ಒಂದಲ್ಲ ಎರಡಲ್ಲ ಹತ್ತು ಹಲವು ಬಗೆಯ ತರಕಾರಿಗಳು ಈ ವ್ಯಕ್ತಿಯ ಮನೆಯಲ್ಲಿ ಬೆಳೆಯುತ್ತದೆ! ಮಣ್ಣಿಲ್ಲ, ರಾಸಾಯನಿಕಗಳ ಹಾವಳಿ ಇಲ್ಲ. ಮನೆಯ ಬಾಲ್ಕನಿ, ಕಿಟಕಿ , ತಾರಸಿ, ಎಲ್ಲಿ ನೋಡಿದರಲ್ಲಿ ಹಸಿ ಹಸಿ ತಾಜಾ ತಾಜಾ ತರಕಾರಿ. 3 ಅಂತಸ್ತಿನ ಮನೆಯಲ್ಲಿ ತರಕಾರಿ ಬೆಳೆಯುವ ಇವರ ವಾರ್ಷಿಕ ಆದಾಯ ಬರೋಬ್ಬರಿ 70 ಲಕ್ಷ ರೂ!
ಇದು ಉತ್ತರ ಪ್ರದೇಶದ ಬರೇಲಿ ನಿವಾಸಿ ರಾಮ್‌ವೀರ್ ಸಿಂಗ್ ಅವರ ಯಶೋಗಾಥೆ. ಮಾಜಿ ಪೂರ್ಣಕಾಲಿಕ ಪತ್ರಕರ್ತ, ರಾಮ್‌ವೀರ್ ಸಿಂಗ್ ತಮ್ಮ ಕೆಲಸವನ್ನು ತೊರೆದು ಸಾವಯವ ತರಕಾರಿಗಳನ್ನು ಬೆಳೆದು ಎಲ್ಲರಿಗೂ ಮಾದರಿಯಾದ ಕಥೆ.
ಪತ್ರಕರ್ತನಿಂದ ರೈತನಾಗುವ ಪಯಣ ಶುರುವಾದದ್ದು ಹೇಗೆ?
2009 ರಲ್ಲಿ, ರಾಮ್‌ವೀರ್ ಸಿಂಗ್ ಅವರ ಸ್ನೇಹಿತನ ಚಿಕ್ಕಪ್ಪ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ, ಸಿಂಗ್ ವ್ಯಾಪಕವಾದ ಸಂಶೋಧನೆ ನಡೆಸುತ್ತಾರೆ. ಆಗ ಅವರು ಅರಿತ ವಿಚಾರ ಅತಿಯಾದ ರಾಸಾಯನಿಕಗಳಿಂದ ತುಂಬಿದ ತರಕಾರಿಗಳಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು. ಈ ಸಂಶೋಧನೆಯಿಂದ ಆಘಾತಗೊಂಡ ಅವರು ತಮ್ಮ ಪರಿವಾರವನ್ನು ರಾಸಾಯನಿಕಯುಕ್ತ ತರಕಾರಿಗಳಿಂದ ದೂರವಿರಿಸುವ ಪಣ ತೊಡುತ್ತಾರೆ. ತಮ್ಮ ಮಾಧ್ಯಮ ಕೆಲಸದಿಂದ ವಿರಾಮ ಪಡೆದು ಅರೆಕಾಲಿಕ ಪತ್ರಕರ್ತನಾಗಿ ದುಡಿಯುವ ಜೊತೆ ಪೂರ್ವಜರ ಭೂಮಿಯಲ್ಲಿ ಕೃಷಿ ಮಾಡಲು ನಿರ್ಧರಿಸುತ್ತಾರೆ. ಅಲ್ಲಿಂದ ಶುರುವಾಯ್ತು ಅವರ ಕೃಷಿ ಪಯಣ.
ಬರೇಲಿಯಿಂದ 40 ಕಿಮೀ ದೂರದಲ್ಲಿರುವ ಅವರ ಪೂರ್ವಜರ ಭೂಮಿಯಲ್ಲಿ ಕೃಷಿ ಮಾಡಲು ತೊಡಗುತ್ತಾರೆ ರಾಮ್ ವೀರ್. 2017-18ರಲ್ಲಿ ಕೃಷಿ ಸಂಬಂಧಿತ ಕಾರ್ಯಕ್ರಮಕ್ಕಾಗಿ ದುಬೈಗೆ ಹೋಗಿದ್ದಾಗ ಅಲ್ಲಿ ಮಣ್ಣು ಮತ್ತು ರಾಸಾಯನಿಕಗಳ ಹಂಗಿಲ್ಲದ ಹೈಡ್ರೋಪೋನಿಕ್ಸ್ ಕೃಷಿಯನ್ನು ಕಂಡು ಈ ವಿಧಾನದಿಂದ ಅವರು ರೋಮಾಂಚನಗೊಂಡರು. ಅಲ್ಲಿ ಅವರು ಹೈಡ್ರೋಪೋನಿಕ್ಸ್ ವಿಧಾನಕ್ಕೆ ಮಣ್ಣಿನ ಅಗತ್ಯವಿಲ್ಲ ಜೊತೆಗೆ ಕೀಟಗಳ ಬಾಧೆ ಕಡಿಮೆ ಮತ್ತು ಸಸ್ಯಗಳನ್ನು ಬೆಳೆಯಲು ಅಗತ್ಯವಿರುವ ಸುಮಾರು 80 ಪ್ರತಿಶತದಷ್ಟು ನೀರನ್ನು ಉಳಿಸಬಹುದು ಎಂದು ಅರಿತರು.
ಅಲ್ಲಿ ರಾಮ್‌ವೀರ್ ಎರಡು ವಾರಗಳ ಕಾಲ ರೈತರಿಂದ ಈ ಕೃಷಿ ತಂತ್ರಗಳನ್ನು ಕಲಿತರು. ಭಾರತಕ್ಕೆ ಹಿಂದಿರುಗಿದ ನಂತರ, ತಮ್ಮ ಮನೆಯಲ್ಲಿ ಈ ಕೃಷಿ ತಂತ್ರಗಳನ್ನು ಪ್ರಯೋಗಿಸಲು ನಿರ್ಧರಿಸಿದರು. ಹೈಡ್ರೋಪೋನಿಕ್ಸ್ ಫಾರ್ಮ್‌ಗಳ ಮೇಲಿನ ಅವರ ಉತ್ಸಾಹ ಮತ್ತು ಪ್ರೀತಿಯಿಂದ, ಅವರು ಇಂದು ತಮ್ಮ ಮೂರು ಅಂತಸ್ತಿನ ಮನೆಯನ್ನು ಹೈಡ್ರೋಪೋನಿಕ್ಸ್ ಫಾರ್ಮ್ ಆಗಿ ಪರಿವರ್ತಿಸುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ.
ಹೈಡ್ರೋಪೋನಿಕ್ಸ್ ವಿಧಾನದಿಂದ ತರಕಾರಿ ಕೃಷಿ
ತಮ್ಮ ಮನೆಯ ಬಾಲ್ಕನಿಗಳಲ್ಲಿ ಮತ್ತು ತಾರಸಿಯಲ್ಲಿ ಹೈಡ್ರೋಪೋನಿಕ್ಸ್ ವ್ಯವಸ್ಥೆಯನ್ನು ಅಳವಡಿಸಲು ಪಿವಿಸಿ ಪೈಪ್‌ಗಳು ಮತ್ತು ಇತರ ಮೂಲಸೌಕರ್ಯಗಳನ್ನು ಬಳಸಲು ಪ್ರಾರಂಭಿಸಿದ ಅವರು, ಪೋಷಕಾಂಶದ ಫಿಲ್ಮ್ ತಂತ್ರ (ಎನ್.ಎಫ್.ಟಿ) ಮತ್ತು ಆಳವಾದ ಹರಿವಿನ ತಂತ್ರ (ಡಿ.ಎಫ್.ಟಿ) ಅನ್ನು ಬಳಸಿಕೊಂಡು ಹೈಡ್ರೋಪೋನಿಕ್ಸ್ ಕೃಷಿಗಾಗಿ ಎರಡು ವಿಧಾನಗಳನ್ನು ಸ್ಥಾಪಿಸಿದ್ದಾರೆ. ಪ್ರಸ್ತುತ, ಅವರ ಫಾರ್ಮ್ 750 ಚದರ ಮೀಟರ್ ಜಾಗದಲ್ಲಿ ಹರಡಿಕೊಂಡಿದ್ದು 10,000 ಕ್ಕೂ ಹೆಚ್ಚು ಸಸ್ಯಗಳನ್ನು ಹೊಂದಿದೆ.
ನಾನು ಎಲ್ಲಾ ಋತುವಿಗೆ ತಕ್ಕ ತರಕಾರಿಗಳನ್ನು ಹೈಡ್ರೋಪೋನಿಕ್ಸ್‌ನೊಂದಿಗೆ ಬೆಳೆಯುತ್ತೇನೆ. ಈ ವ್ಯವಸ್ಥೆಯನ್ನು ಪಿವಿಸಿ ಪೈಪ್ ಬಳಸಿ ವಿನ್ಯಾಸಗೊಳಿಸಲಾಗಿದೆ ಮತ್ತು ಗುರುತ್ವಾಕರ್ಷಣೆಯ ಸಹಾಯದಿಂದ ನೀರನ್ನು ಪರಿಚಲನೆ ಮಾಡಲಾಗುತ್ತದೆ. ಸುಮಾರು 16 ಪೋಷಕಾಂಶಗಳಾದ ಮೆಗ್ನೀಸಿಯಮ್, ತಾಮ್ರ, ರಂಜಕ, ಸಾರಜನಕ, ಸತು ಮತ್ತು ಇತರವುಗಳನ್ನು ಹರಿಯುವ ನೀರಿಗೆ ಹಾಕಿ ಸಸ್ಯಗಳನ್ನು ತಲುಪುವಂತೆ ನೋಡಿಕೊಳ್ಳಲಾಗುತ್ತದೆ. ಈ ವಿಧಾನದಿಂದ ಶೇ 90ರಷ್ಟು ನೀರಿನ ಬಳಕೆ ಉಳಿತಾಯವಾಗುತ್ತದೆ ರಾಮ್ ವೀರ್ ವಿವರಿಸುತ್ತಾರೆ.
ಹೈಡ್ರೋಪೋನಿಕ್ಸ್ ಕೃಷಿಯಲ್ಲಿ ಬೆಳೆದ ತರಕಾರಿಗಳು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ. ಇದಲ್ಲದೆ, ರಾಸಾಯನಿಕ ಕೃಷಿಯನ್ನು ಅವಲಂಬಿಸಿರುವ ರೈತರು ಸಾಂಪ್ರದಾಯಿಕ ಕೃಷಿಯಲ್ಲಿ ರಾಸಾಯನಿಕಗಳು ಅಥವಾ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಈ ವಿಧಾನದಲ್ಲಿ ರಾಸಾಯನಿಕ ಬಳಕೆ ಇಲ್ಲವಾದ್ದರಿಂದ ಮಣ್ಣಿನ ಮಾಲಿನ್ಯ ಅಥವಾ ರಾಸಾಯನಿಕ ಯುಕ್ತ ಆಹಾರದ ಅಪಾಯವನ್ನು ಹೊಂದಿಲ್ಲ. ಹೈಡ್ರೋಪೋನಿಕ್ಸ್ ಕೃಷಿ ಹಾನಿಕಾರಕ ರಾಸಾಯನಿಕಗಳಿಂದ ಸ್ವತಂತ್ರವಾಗಿದೆ ಎಂದು ಅವರು ಹೇಳುತ್ತಾರೆ.
ಹೈಡ್ರೋಪೋನಿಕ್ಸ್ ಕೃಷಿಯಲ್ಲಿ ಆಸಕ್ತಿ ಇರುವ ರೈತರಿಗೆ ರಾಮ್ ವೀರ್ ಅವರು ವಿಂಪ ಆರ್ಗಾನಿಕ್ ಮತ್ತು ಹೈಡ್ರೋಪೋನಿಕ್ಸ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಇದರಿಂದ ಅವರು ವರ್ಷಕ್ಕೆ 70 ಲಕ್ಷ ಆದಾಯ ಗಳಿಸುತ್ತಾರೆ.
ಮಾಹಿತಿ/ಚಿತ್ರ ಕೃಪೆ: ದ ಬೆಟರ್ ಇಂಡಿಯಾ