ಇವಿಎಂ : ಸೋರ್ಸ್​ ಕೋಡ್​ ಆಡಿಟ್​ ಕೋರಿದ್ದ ಪಿಐಎಲ್​ ವಜಾ

ನವದೆಹಲಿ: ಇವಿಎಂಗಳ ಸೋರ್ಸ್ ಕೋಡ್​ ಆಡಿಟ್​ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾ ಮಾಡಿದೆ. ವಿದ್ಯುನ್ಮಾನ ಮತದಾನ ಯಂತ್ರಗಳಲ್ಲಿ (ಇವಿಎಂ) ಬಳಸುವ ಸೋರ್ಸ್​ ಕೋಡ್ ಅನ್ನು ಆಡಿಟ್​ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಇವಿಎಂಗಳ ಸೋರ್ಸ್​ ಕೋಡ್​ ಬಗ್ಗೆ ಅನುಮಾನಿಸಲು ನ್ಯಾಯಾಲಯದ ಮುಂದೆ ತಾವು ಪ್ರಸ್ತುತಪಡಿಸುತ್ತಿರುವ ಪುರಾವೆಗಳೇನು ಎಂದು ಮುಖ್ಯ ನ್ಯಾಯಮೂರ್ತಿ ಈ ಸಂದರ್ಭದಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಹ್ಯಾ, ಆಯೋಗವು ಈ ವಿಷಯದಲ್ಲಿ ಯಾವುದೇ ನಿರ್ದಿಷ್ಟ ಮಾನದಂಡವನ್ನು ಅನುಸರಿಸಿಲ್ಲ ಮತ್ತು ಯಾವುದೇ ಮಾನದಂಡವನ್ನು ಬಹಿರಂಗಪಡಿಸಿಲ್ಲ ಎಂದರು. ಅಲ್ಲದೆ ಸೋರ್ಸ್ ಕೋಡ್ ಇವಿಎಂನ ಮೆದುಳಾಗಿದ್ದು, ಯಾವುದೇ ಆಡಿಟ್​ ಮಾನ್ಯತೆ ಪಡೆದ ಮಾನದಂಡದ ಪ್ರಕಾರ ಇರಬೇಕು ಎಂದು ಅಹ್ಯಾ ಹೇಳಿದರು.ಇವಿಎಂಗಳ ಸೋರ್ಸ್​ ಕೋಡ್​ ಆಡಿಟ್​ ಗೆ ಸಂಬಂಧಿಸಿದ ಒಂದೇ ವಿಷಯಕ್ಕಾಗಿ ತಾವು ಈ ರಿಟ್ ಅರ್ಜಿಯನ್ನು ಸಲ್ಲಿಸಿರುವುದಾಗಿ ಅರ್ಜಿದಾರ ಸುನಿಲ್ ಅಹ್ಯಾ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ವಾದಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ನಾನು ಮೂರು ಮನವಿ ಸಲ್ಲಿಸಿದ್ದೇನೆ. ಆದರೆ ಅವರು ಮಾತ್ರ ಮೌನವಾಗಿದ್ದಾರೆ ಎಂದ ಅಹ್ಯಾ, ಸೋರ್ಸ್​ ಕೋಡ್​ ಇವಿಎಂನ ಮೆದುಳಾಗಿದೆ ಮತ್ತು ಈ ವಿಷಯವು ಪ್ರಜಾಪ್ರಭುತ್ವದ ಉಳಿವಿಗೆ ಸಂಬಂಧಿಸಿದೆ ಎಂದು ಪುನರುಚ್ಚರಿಸಿದರು. ಅಲ್ಲದೆ ಸೋರ್ಸ್​ ಕೋಡ್​ನ ಅರ್ಥವನ್ನು ನ್ಯಾಯಾಲಯಕ್ಕೆ ವಿವರಿಸಲು ಪ್ರಯತ್ನಿಸಿದರು.

ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ನ್ಯಾಯಪೀಠವು ಸೋರ್ಸ್ ಕೋಡ್ ಎಂದರೇನು ಎಂಬುದು ತನಗೆ ತಿಳಿದಿದೆ ಮತ್ತು ಸಾಫ್ಟ್​ವೇರ್​ನ ಸೋರ್ಸ್ ಕೋಡ್ ಅನ್ನು ಸಾರ್ವಜನಿಕವಾಗಿ ಬಹಿರಂಗವಾಗಿ ಪ್ರದರ್ಶಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಇವಿಎಂಗಳು ಹ್ಯಾಕ್ ಆಗುವ ಅಪಾಯವಿರುತ್ತದೆ ಎಂದು ಹೇಳಿತು.

“ಇಂಥ ಸರ್ಕಾರದ ನೀತಿ ವಿಷಯದ ಬಗ್ಗೆ, ಅರ್ಜಿದಾರರು ಕೋರಿರುವ ನಿರ್ದೇಶನಗಳನ್ನು ನೀಡಲು ನಾವು ಒಲವು ಹೊಂದಿಲ್ಲ. ಚುನಾವಣಾ ಆಯೋಗವು ಈ ವಿಷಯದಲ್ಲಿ ತನ್ನ ಜವಾಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸುತ್ತಿಲ್ಲ ಎಂದು ಹೇಳಲು ಈ ನ್ಯಾಯಾಲಯದ ಮುಂದೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ ನಾವು ಈ ಅರ್ಜಿಯನ್ನು ಪರಿಗಣಿಸಲು ಒಲವು ಹೊಂದಿಲ್ಲ” ಎಂದ ಸುಪ್ರೀಂ ಕೋರ್ಟ್ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.

ಸುಪ್ರೀಂ ಕೋರ್ಟ್​ನ ವೆಬ್​ಸೈಟ್​ನಲ್ಲಿ ನಾವು ಅಪ್ಲಿಕೇಶನ್​ ಒಂದನ್ನು ಅಳವಡಿಸಿದಾಗ ಅದನ್ನು ಸೆಕ್ಯೂರಿಟಿ ಆಡಿಟ್ ಮಾಡಲಾಗಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಹ್ಯಾ, ಅವರು ಯಾವ ಮಾನದಂಡಗಳನ್ನು ಅನುಸರಿಸುತ್ತಿದ್ದಾರೆ ಎಂಬುದು ಸಾರ್ವಜನಿಕವಾಗಿ ಲಭ್ಯವಿಲ್ಲ ಎಂದು ಹೇಳಿದ ಅವರು, ಹ್ಯಾಶ್ ಫಂಕ್ಷನ್ ಸಿಗ್ನೇಚರ್ ಎಲ್ಲಿದೆ ಎಂದು ಪ್ರಶ್ನಿಸಿದರು.

ಸೋರ್ಸ್​ ಕೋಡ್​ ಅನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದರೆ ಅದನ್ನು ಯಾರು ಹ್ಯಾಕ್ ಮಾಡುತ್ತಾರೆ ಎಂಬುದು ನಿಮಗೆ ತಿಳಿದಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಹ್ಯಾ, ಸೋರ್ಸ್​ ಕೋಡ್​ ಅನ್ನು ಬಹಿರಂಗಪಡಿಸಬೇಕೆಂಬುದು ನನ್ನ ಅರ್ಜಿಯ ಬೇಡಿಕೆಯಲ್ಲ. ಸೋರ್ಸ್​ ಕೋಡ್​ ಇವಿಎಂ ವ್ಯವಸ್ಥೆಯ ಮೆದುಳಾಗಿದೆ ಮತ್ತು ಜನ ಅದನ್ನು ನಂಬಿ ಮತ ಚಲಾಯಿಸುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, “ಪ್ರಮಾಣಿತ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ನೀವು ಭರವಸೆಯಿಂದ ಇರಿ.. ಅದನ್ನು ಸಾರ್ವಜನಿಕ ಡೊಮೇನ್ ನಲ್ಲಿ ಇರಿಸಿದ ತಕ್ಷಣ ಅದು ದುರುಪಯೋಗಕ್ಕೆ ಒಳಗಾಗುವ ಅಪಾಯವಿದೆ.” ಎಂದರು.