ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಮಕ್ಕಳ ಅಸ್ಥಿ ಮಜ್ಜೆ ಕಸಿಯ ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಭಾಗವಾಗಿರುವ ಮಕ್ಕಳ ರಕ್ತಶಾಸ್ತ್ರ ಮತ್ತು ಅಂಕೋಲಜಿ ವಿಭಾಗವು ಮಕ್ಕಳ ಅಸ್ಥಿಮಜ್ಜೆ ಕಸಿ ಸೌಲಭ್ಯದ ಯಶಸ್ಸನ್ನು ಆಚರಿಸುವ ಕಾರ್ಯಕ್ರಮವನ್ನು ಆಗಸ್ಟ್ 3 ರಂದು ನಗರದ ಓಶಿಯನ್ ಪರ್ಲ್ ಹೋಟೆಲಿನಲ್ಲಿ ಆಯೋಜಿಸಲಾಗಿತ್ತು.

ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಶರತ್ ಕುಮಾರ್ ರಾವ್ ಮಕ್ಕಳ ಅಸ್ಥಿಮಜ್ಜೆ ಕಸಿ ಕ್ಲಿನಿಕ್ ನ ಮಾಹಿತಿ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ ಅಸ್ಥಿಮಜ್ಜೆ ಕಸಿ ವಿವಿಧ ಬಗೆಯ ಕ್ಯಾನ್ಸರ್ ಮತ್ತು ರಕ್ತ ಸಂಬಂಧಿ ಅಸ್ವಸ್ಥತೆಗಳಿಗೆ ಜೀವರಕ್ಷಕ ವಿಧಾನವಾಗಿದೆ. ಇಂತಹ ಸಂಕೀರ್ಣ ವೈದ್ಯಕೀಯ ಚಿಕಿತ್ಸೆಯನ್ನು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಈಗ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಮಕ್ಕಳಿಗಾಗಿ ಈ ಸುಸಜ್ಜಿತ ಸೇವೆಗಳನ್ನು ಪ್ರಾರಂಭಿಸಿದೆ ಎಂದರು.

ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಮಕ್ಕಳ ಅಸ್ಥಿಮಜ್ಜೆ ಕಸಿ ತಜ್ಞ ಡಾ.ವಿನಯ್ ಎಂ.ವಿ ಅವರು ಮಕ್ಕಳಲ್ಲಿ ಅಸ್ಥಿಮಜ್ಜೆಯ ಕಸಿ ಪ್ರಕ್ರಿಯೆಯ ಕುರಿತು ಅವಲೋಕನವನ್ನು ನೀಡಿದರು.

ಸಹ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥ ಡಾ. ವಾಸುದೇವ್ ಭಟ್ ಕೆ ಮಾತನಾಡಿ, ಮೂಳೆ ಮಜ್ಜೆಯ ಕಸಿ ಮಾಡುವಿಕೆಯು ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ಅನೇಕ ರೋಗಿಗಳ ಜೀವನವನ್ನು ಬದಲಾಯಿಸಿದೆ. ವಿಭಾಗವು ಇಲ್ಲಿಯವರೆಗೆ ಅಂತಹ 10 ಕಸಿಗಳನ್ನು ಪೂರ್ಣಗೊಳಿಸಿದೆ ಮತ್ತು ಈ ರೋಗಿಗಳನ್ನು ಯಶಸ್ವಿಯಾಗಿ ಗುಣಪಡಿಸಿದೆ ಎಂದರು.

ವಿಭಾಗದ ಸಹಾಯಕ ಪ್ರಾಧ್ಯಪಕಿ ಡಾ. ಅರ್ಚನಾ ಎಂ.ವಿ ಮಾಹಿತಿ ನೀಡಿ, ವಿಭಾಗವು ಸಾಧ್ಯವಾದಾಗಲೆಲ್ಲಾ ಆರ್ಥಿಕ ನೆರವು, ಪೂರಕ ಪೌಷ್ಟಿಕಾಂಶ ಮತ್ತು ವಸತಿ ಸೌಲಭ್ಯ ಒದಗಿಸುವ ಮೂಲಕ ಈ ರೋಗಿಗಳಿಗೆ ಸಮಗ್ರ ಚಿಕಿತ್ಸೆ ನೀಡುತ್ತಿದೆ ಎಂದರು.

ಮಾರುಕಟ್ಟೆ ವಿಭಾಗದ ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.