‘ನಾನು ಕೈಬೀಸಿದರೂ ಯಾರೂ ನನ್ನ ನೋಡಲಿಲ್ಲ,ಯಾರೂ ಹತ್ತಿರ ಬರಲಿಲ್ಲ ನನ್ನ ಅಹಂಕಾರ ಪುಡಿಯಾಯಿತು’-ನಟ ರಜನಿಕಾಂತ್

ಮಂಗಳವಾರ ನಡೆದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರುಜಿ ಅವರ 70ನೇ ಜನ್ಮದಿನದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭವನ್ನು ನೆನಪಿಸಿಕೊಂಡರು.

“ಒಮ್ಮೆ ಗುರುದೇವರು ಆಶ್ರಮದ ಸುತ್ತಾಟಕ್ಕೆ ನನ್ನನ್ನು ಕರೆದಿದ್ದರು. ನಾನು ಹೋದರೆ ಜನರು ಗುಂಪುಗೂಡಿ ಫೋಟೋ, ಆಟೋಗ್ರಾಫ್ ಕೇಳುತ್ತಾರೆ ಎಂದು ಹೇಳಿದ್ದೆ. ಆದರೆ ಅವರು ‘ಯಾವ ತೊಂದರೆಯೂ ಆಗುವುದಿಲ್ಲ, ಬನ್ನಿ’ ಎಂದರು,”

“ಅಲ್ಲಿ ಸಾವಿರಾರು ಜನರಿದ್ದರು. ತಮಿಳುನಾಡಿನಿಂದ ಬಂದವರನ್ನೂ ನೋಡಿದೆ. ಆದರೆ ನಿಜ ಹೇಳಬೇಕೆಂದರೆ, ಒಬ್ಬನೇ ಒಬ್ಬ ವ್ಯಕ್ತಿಯೂ ನನ್ನತ್ತ ನೋಡಲಿಲ್ಲ. ಫೋಟೋ, ಆಟೋಗ್ರಾಫ್ ಕೂಡ ಕೇಳಲಿಲ್ಲ, ಯಾರೂ ಮಾತನಾಡಲಿಲ್ಲ ಕೂಡ. ನಾನು ಕೈ ಬೀಸುತ್ತಿದ್ದರೂ ಯಾರೂ ಗಮನಿಸಲಿಲ್ಲ. ಆ ಘಟನೆ ನನ್ನ ಅಹಂಕಾರವನ್ನು ಪುಡಿಮಾಡಿತು,” ಎಂದು ಅವರು ಮನದಾಳದ ಅನುಭವ ಹಂಚಿಕೊಂಡಿದ್ದಾರೆ.