ಮಂಗಳೂರು: ಶಿಕ್ಷಣ ಮತ್ತು ಆರೋಗ್ಯ ಇದ್ದರೆ ಉಳಿದ್ದೆಲ್ಲವೂ ತಾನಾಗಿಯೇ ಬರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸಿಗಬೇಕು. ಕಾಯಿಲೆಗೆ ಪ್ರಾರಂಭದ ಹಂತದಲ್ಲೇ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಟ್ಟರೆ ಮುಂಬರುವ ದೊಡ್ಡಮಟ್ಟದ ತೊಂದರೆಗಳನ್ನು ತಪ್ಪಿಸಬಹುದು ಎಂದು ಭರವಸೆ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷೆ ಹಾಗೂ ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಹೇಳಿದರು.
ಭಾನುವಾರದಂದು ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ಆಶ್ರಯದಲ್ಲಿ ಭರವಸೆ ಚಾರಿಟೆಬಲ್ ಫೌಂಡೇಶನ್ ಬೆಂಗಳೂರು ವತಿಯಿಂದ ಶ್ರೀ ಗೋಕರ್ಣನಾಥ ಕಾಲೇಜು ಸಭಾಂಗಣದಲ್ಲಿ ಉಚಿತ ಬೃಹತ್ ಆರೋಗ್ಯ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸಿಪಿ ಮಹೇಶ್‌ಕುಮಾರ್ ಮಾತನಾಡಿ, ಆರೋಗ್ಯ ಶಿಸ್ತನ್ನು ಕಾಪಾಡುವ ಕಾರ್ಯಕ್ರಮಗಳು ಪ್ರತಿ ಹಳ್ಳಿಯಲ್ಲೂ ನಡೆಯಬೇಕು ಎಂದು ಹೇಳಿದರು.
ಗುರುಬೆಳದಿಂಗಳು ಫೌಂಡೇಶನ್ ನ ಅಧ್ಯಕ್ಷ ಪದ್ಮರಾಜ್ ಆರ್. ಮಾತನಾಡಿ, ಕೋವಿಡ್ ಬಳಿಕ ಕಳೆದ ಒಂದು ವರ್ಷದಿಂದ ಪ್ರತಿ ದಿನ ಎಳೆಯ ಪ್ರಾಯದ ಯುವಕರು ಹೃದಯಾಘಾತಕ್ಕೆ ತುತ್ತಾಗಿ ಸಾವನಪ್ಪುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.
ಗೋಕರ್ಣನಾಥ ಕಾಲೇಜಿನ ಶಿಕ್ಷಣ ಸಂಸ್ಥೆಯ ಡೀನ್ ಡಾ.ಉಮ್ಮಪ್ಪ ಪೂಜಾರಿ, ಸೂಪರಿಂಟೆಂಡೆಂಟ್ ನಾಗೇಶ್ ಕರ್ಕೇರ, ಕುದ್ರೋಳಿ ಯುವಕ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಭರವಸೆ ಚಾರಿಟೆಬಲ್ ಟ್ರಸ್ಟ್ ನ ಡಾ.ಕೆ.ಎನ್.ಪ್ರಸಾದ್., ವ್ಯವಸ್ಥಾಪಕ ನಿರ್ದೇಶಕಿ ಗೀತಾ ಉಚ್ಚಿಲ್ ಮೊದಲಾದವರಿದ್ದರು.
ಗುರುಬೆಳದಿಂಗಳು ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಬಂಟ್ವಾಳ ಸ್ವಾಗತಿಸಿದರು. ಪವಿತ್ರಾ ಪೂಜಾರಿ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಸ್ತ್ರೀರೋಗ ತಜ್ಞೆ ಡಾ.ಪದ್ಮನಿ ಪ್ರಸಾದ್ ನೇತೃತ್ವದಲ್ಲಿ ಖ್ಯಾತ ವೈದ್ಯರ ತಂಡದೊಂದಿಗೆ ಮಹಿಳೆಯರ ಮುಟ್ಟಿನ ತೊಂದರೆ, ಬಂಜೆತನ, ಲೈಂಗಿಕ ಸಮಸ್ಯೆ, ರಕ್ತಹೀನತೆ, ಎಚ್.ಪಿ.ವಿ ಪರೀಕ್ಷೆ (ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್) ತಪಾಸಣೆ, ಮಾರ್ಗದರ್ಶನ, ಚಿಕಿತ್ಸೆ, ಅರಿವು ಆಪ್ತಸಮಾಲೋಚನೆ ನಡೆಯಿತು. ನೂರಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.