ಕರ್ನಾಟಕದ ಗಂಡು ಕಲೆಗೆ ಅವಮಾನ; ಕರಾವಳಿಗರು ಕೆಂಡಾಮಂಡಲ: ಝೀ ವಾಹಿನಿ ಕ್ಷಮೆ ಕೇಳಿದರು ತಗ್ಗಲಿಲ್ಲ ಕೋಪ

ಬೆಂಗಳೂರು: ಕರಾವಳಿಯಲ್ಲಿ ಬಹಳ ಪೂಜ್ಯ ಭಾವನೆಯಿಂದ ಕಾಣಲಾಗುವ ಗಂಡು ಕಲೆ ಯಕ್ಷಗಾನಕ್ಕೆ ಝೀ ಕನ್ನಡ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಅವಮಾನವಾಗಿರುವ ಬಗ್ಗೆ ಕರಾವಳಿಗರು ಕೆಂಡಾಮಂಡಲರಾಗಿದ್ದು, ವಾಹಿನಿಯ ಮುಖ್ಯಸ್ಥ, ನೃತ್ಯ ನಿರ್ದೇಶಕ, ನಿರೂಪಕಿ ಹಾಗು ತೀರ್ಪುಗಾರರಿಗೆ ಮಾತಿನ ಚಾಟಿ ಏಟು ಬೀಸಿದ್ದು, ಬಾಯ್ಕಾಟ್ ಝೀ ಎನ್ನುವ ಅಭಿಯಾನಕ್ಕೆ ನಾಂದಿ ಹಾಡಿದ್ದರು.

ಕರಾವಳಿಗರ ಮತ್ತು ಯಕ್ಷಾಭಿಮಾನಿಗಳ ಕೋಪಕ್ಕೆ ಹೆದರಿದ ವಾಹಿನಿ ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ್ದರೂ ಅಭಿಮಾನಿಗಳ ಕೋಪ ಇನ್ನೂ ಆರಿಲ್ಲ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಪುಷ್ಪಾ ಚಿತ್ರದ ಹಾಡೊಂದರಲ್ಲಿ ನಾಯಕ ಭುಜ ಎಗರಿಸುತ್ತ ಸೊಟ್ಟಕಾಲಲ್ಲಿ ನಡೆಯುವುದನ್ನು ಯಕ್ಷಗಾನದಲ್ಲಿ ಅಳವಡಿಸಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಕ್ಷಗಾನ ಪ್ರಿಯರು ಖಂಡಿಸಿ ಬಾಯ್​ಕಾಟ್ ಜೀ ಕನ್ನಡ ಅಭಿಯಾನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಝೀ ಕನ್ನಡ ವಾಹಿನಿ ಯಕ್ಷಗಾನ ಪ್ರಿಯರ ಕ್ಷಮೆ ಕೋರಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಝೀ ಕನ್ನಡ ವಾಹಿನಿ, “ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಯಕ್ಷಗಾನ ಕೆಲವರ ಭಾವನೆಗಳಿಗೆ ಧಕ್ಕೆಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಾಗಿ ಆಗಿಲ್ಲವೆಂದು ವಾಹಿನಿ ಸ್ಪಷ್ಟೀಕರಿಸಲು ಬಯಸುತ್ತದೆ ಮತ್ತು ಈ ಮೂಲಕ ಕ್ಷಮೆಯಾಚಿಸುತ್ತೇವೆ”.

“ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮೂಲಕ ಅನೇಕ ಕಲಾ ಪ್ರಕಾರಗಳನ್ನು ಗೌರವಿಸುತ್ತ ನಾಡಿನ ಜನತೆಗೆ ಪರಿಚಯಿಸುತ್ತಲೇ ಬಂದಿದ್ದೇವೆ. ನಮ್ಮ ವೇದಿಕೆಯಲ್ಲಿ ಯಕ್ಷಗಾನಕ್ಕೂ ಸಹ ಪ್ರಾಮುಖ್ಯತೆ ನೀಡಿದ್ದು, ನೃತ್ಯಾಭಿಮಾನಿಗಳ ಪ್ರಶಂಸೆ ಪಡೆದಿದ್ದೇವೆ. ನಮ್ಮ ಎಲ್ಲ ಕಾರ್ಯಕ್ರಮಗಳನ್ನು ಪ್ರೀತಿಯಿಂದ ಪ್ರೋತ್ಸಾಹಿಸಿದ್ದೀರಿ. ಉದ್ದೇಶಪೂರ್ವಕವಲ್ಲದ ಈ ಸಂಗತಿಯನ್ನು ಕ್ಷಮಿಸುತ್ತೀರೆಂಬ ನಂಬಿಕೆ ಇದೆ. ನಿಮ್ಮ ಪ್ರೀತಿ ಬೆಂಬಲವನ್ನು ಝೀ ಕನ್ನಡ ಸದಾ ಆಶಿಸುತ್ತದೆ. ನಮ್ಮ ಅತ್ಯುತ್ತಮ ಕೆಲಸಗಳಿಗೆ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ಸಹ ನಾವು ಸ್ವಾಗತಿಸುತ್ತೇವೆ. ಇಲ್ಲಿಯವರೆಗೆ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೆಯೇ ಮುಂದುವರೆಯಲಿ” ಎಂದು ಝೀ ಕನ್ನಡ ವಾಹಿನಿ ಆಶಿಸುತ್ತದೆ ಎಂದು ಬರೆದುಕೊಂಡಿದೆ.

ಆದಾಗ್ಯೂ, ಯಕ್ಷಪ್ರಿಯರ ಕೋಪ ಮಾತ್ರ ತಣ್ಣಗಾಗಿಲ್ಲ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಬೂಬು ನೀಡುವ ಬದಲು, ಅವಮಾನವಾದ ವೇದಿಕೆಯ ಮೇಲೆ ಬಂದು ಕ್ಷಮೆ ಕೇಳಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಇಂತಹ ಘಟನೆಗಳು ಮುಂದೆ ಯಾವ ವಾಹಿನಿಯಲ್ಲೂ ನಡೆಯಬಾರದು ಅದಕ್ಕಾಗಿ ತಪ್ಪಿತಸ್ಥರು ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯ ಮೇಲೆ ಬಂದು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ವಾಹಿನಿ ವೇದಿಕೆಯಲ್ಲೇ ಕ್ಷಮೆ ಕೇಳುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.