ಉಡುಪಿ: ಮತದಾರರೆಲ್ಲಾ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಸಲುವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಜಾಗೃತ ವೇದಿಕೆಯನ್ನು ಸ್ಥಾಪಿಸಲಾಗಿದ್ದು, ಕಚೇರಿಯ ಮುಖ್ಯಸ್ಥರು ಇದರ ಅಧ್ಯಕ್ಷರಾಗಿದ್ದು, ಉಳಿದ ಸಿಬ್ಬಂದಿಗಳು ಸದಸ್ಯರಾಗಿರುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲೆಯ ಸ್ವೀಪ್ ಸಮಿತಿ ಅಧ್ಯಕ್ಷ ಪ್ರಸನ್ನ ಹೆಚ್ ಹೇಳಿದರು.
ಅವರು ಮಂಗಳವಾರ ಮತದಾರರ ಜಾಗೃತಿ ವೇದಿಕೆಗಳ ಸದಸ್ಯರಿಗೆ ಆನ್‌ಲೈನ್ ವೆಬಿನಾರ್ ಮೂಲಕ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಶೇ. 10 ರಷ್ಟು ಹೆಚ್ಚು ಮತದಾನ ನಡೆಯಬೇಕು ಎಂಬ ಗುರಿಯೊಂದಿಗೆ ಜಿಲ್ಲಾ ಸ್ವೀಪ್ ಸಮಿತಿಯಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮಾಹಿತಿಯ ಕೊರತೆಯಿಂದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದಿರುವವರಿಗೆ, ಅವರು ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ, ಅವರ ಮತಗಟ್ಟೆಯ ವಿಳಾಸ, ಮತದಾನ ಪ್ರಕ್ರಿಯೆ ಕುರಿತು ಅರಿವು ಮೂಡಿಸಬೇಕು ಎಂದರು.
ಮತದಾನ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸುವುದು ನಿರಂತರವಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕೊನೆಯವರೆಗೂ ಹೆಸರಿನ ಸೇರ್ಪಡೆಗೆ ಅವಕಾಶವಿದೆ. ಇದನ್ನು ಮೊಬೈಲ್ ಆಪ್ ಮೂಲಕ ಕೂಡ ಮಾಡಬಹುದಾಗಿದೆ. ಬೂತ್ ಮಟ್ಟದಲ್ಲಿ ಮತಗಟ್ಟೆ ಜಾಗೃತ ಸದಸ್ಯರು ಮತದಾನ ಕುರಿತು ಜಾಗೃತಿ ಮೂಡಿಸುವುದರಿಂದ ಮತದಾನ ಪ್ರಮಾಣ ಹೆಚ್ಚಿಸಲು ಸಾಧ್ಯ ಎಂದರು.
ತರಬೇತಿ ನೀಡಿದ ತೋಟಗಾರಿಕೆ ಇಲಾಖೆಯ ಅಧಿಕಾರಿ ಶಾಂತ ಮಾತನಾಡಿ, ಭಾರತೀಯ ನಾಗರೀಕರಾದ ನಾವು ಮತದಾನ ಮಾಡುವುದು ಸಂವಿಧಾನ ಬದ್ದ ಹಕ್ಕಾಗಿದ್ದು, ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಮತದಾನ ಮಾಡಬೇಕು. ಭಾರತೀಯ ಚುನಾವಣಾ ಆಯೋಗವು ಮತದಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮವನ್ನು ರೂಪಿಸಿ, ಇದರ ಮೂಲಕ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಈವರೆಗೆ ಆಯೋಜಿಸುತ್ತಾ ಬಂದಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಚುನಾವಣೆಯ ಮಹತ್ವವನ್ನು ಅರಿತು
ಮತಗಟ್ಟೆಗೆ ತೆರಳಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರೀಕ್ಷಿಸಿಕೊಳ್ಳಲು ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಗೂಗಲ್ ಪ್ಲೇಸ್ಟೋರ್‌ನಲ್ಲಿ ವೋಟರ್ ಹೆಲ್ಪ್ ಲೈನ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಇದರಲ್ಲಿ ನೋಂದಣಿ ಆಗದೇ ಇರುವ 18 ವರ್ಷ ಮೇಲ್ಪಟ್ಟವರು ನೋಂದಣಿ ಮಾಡಿಕೊಳ್ಳಬಹುದು, ನೋಂದಣಿ ಆದ ಮತದಾರರು ನೋಂದಣಿ ಸಂಖ್ಯೆ ನಮೂದಿಸಿದ್ದಲ್ಲಿ ಮತಗಟ್ಟೆಗಳ ವಿವರ ಪಡೆಯಬಹುದಾಗಿದೆ. ಹೆಸರು, ತಿದ್ದುಪಡಿ, ಸೇರ್ಪಡೆ, ಮತಗಟ್ಟೆಗಳ ವಿವರ, ತಮ್ಮ
ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಕೂಡ ಇದರಲ್ಲಿ ದಾಖಲಿಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೋಂದಾಯಿಸಿದವರಿಗೆ ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೂ 15 ದಾಖಲಾತಿಗಳಲ್ಲಿ ಒಂದನ್ನು ತೋರಿಸಿ, ಮತದಾನ ಮಾಡಬಹುದು ಎಂದರು.
ಆನ್‌ಲೈನ್ ವೆಬಿನಾರ್ ತರಬೇತಿಯಲ್ಲಿ, ಮಾಸ್ಟರ್ ಟ್ರೈನಿ ಅಶೋಕ್ ಕಾಮತ್, ವಿವಿಧ ಕಚೇರಿಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು, ವಿವಿಧ ಶಾಲೆಗಳ ಶಿಕ್ಷಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.