ಮಲ್ಪೆ: ನೀರಿನಲ್ಲಿ ಮುಳುಗಿದ್ದ ದುಬಾರಿ ಐ-ಫೋನ್ ಮೇಲೆತ್ತಿ ಮಾಲಕರಿಗೆ ಹಸ್ತಾಂತರಿಸಿದ ಈಶ್ವರ್ ಮಲ್ಪೆ

ಮಲ್ಪೆ: ಇಲ್ಲಿನ ಹೆಸರಾಂತ ಈಜು ತಜ್ಞ, ನೀರಿನಲ್ಲಿ ಮುಳುಗಿದ್ದವರ ಮೇಲೆತ್ತುವ ಆಪದ್ಬಾಂಧವ ಈಶ್ವರ್ ಮಲ್ಪೆ ಅವರು 10 ಫೀಟ್ ನೀರಿನಾಳದಲ್ಲಿ ಮುಳುಗಿದ್ದ ಬಹು ದುಬಾರಿ ಐ-ಫೋನ್ ಅನ್ನು ಮೇಲೆತ್ತಿ ಫೋನಿನ ಮಾಲಕರಿಗೆ ಹಸ್ತಾಂತರಿಸಿದ್ದಾರೆ.

ಮಲ್ಪೆ ದಕ್ಕೆ ಬಳಿ ಈ ಘಟನೆ ನಡೆದಿದ್ದು, ವ್ಯಾಪಾರಸ್ಥರೊಬ್ಬರ 1.5 ಲಕ್ಷದ ಐ-ಫೋನ್ ಒಂದು ನೀರಿಗೆ ಬಿದ್ದಿದ್ದು, ಅದರಲ್ಲಿ ಹಲವು ಪ್ರಮುಖ ಕಡತಗಳಿದ್ದವು ಎನ್ನುವ ಕಾರಣಕ್ಕೆ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ಫೋನ್ ಅನ್ನು ನೀರಿನಿಂದ ಮೇಲೆತ್ತಿ ಕೊಡುವಂತೆ ಮನವಿ ಮಾಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್ ಮಲ್ಪೆ, ನೀರಿಗೆ ಧುಮುಕಿ ಐದೇ ನಿಮಿಷದಲ್ಲಿ ಒಂದು ದುಬಾರಿ ಐ-ಫೋನ್ ಜೊತೆಗೆ ಮತ್ತೊಂದು ಅಜ್ಞಾತ ಫೋನ್ ಒಟ್ಟು ಎರಡು ಫೋನ್ ಗಳನ್ನು ಮೇಲೆತ್ತಿದ್ದಾರೆ.

48 ವರ್ಷ ವಯಸ್ಸಿನ ಈಶ್ವರ್ ಮಲ್ಪೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ವ್ಯಾಪಾರಿಯೊಬ್ಬರು ಮಲ್ಪೆ ದಕ್ಕೆಯಲ್ಲಿ ಮೀನು ಖರೀದಿಸುತ್ತಿರುವ ಸಮಯದಲ್ಲಿ ಫೋನ್ ಅಕಸ್ಮಾತ್ ಆಗಿ ಕೈ ಜಾರಿ ಬಿದ್ದು ನೀರಿನ ಒಡಲನ್ನು ಸೇರಿದೆ. ಆ ಕೂಡಲೇ ಅವರಿಗೆ ಕರೆ ಬಂದಿದೆ. ತಮ್ಮ 20 ವರ್ಷದ ಉಚಿತ ಸೇವೆಯಲ್ಲಿ ದಿನ ನಿತ್ಯ ಇಂತಹ ಹಲವಾರು ಕರೆಗಳು ಅವರಿಗೆ ಬರುತ್ತಲೇ ಇರುತ್ತವೆ. ತಮ್ಮ ಇಷ್ಟು ವರ್ಷದ ನಿಸ್ವಾರ್ಥ ಸೇವೆಯ ಜೀವನದಲ್ಲಿ ಇದುವರೆಗೆ 900 ದೇಹಗಳು, 100 ದ್ವಿಚಕ್ರ ವಾಹನಗಳು ಮತ್ತು 10 ಕಾರ್ಗೋ ವಾಹನಗಳನ್ನು ಅವರು ನೀರಿನಿಂದ ಮೇಲಕ್ಕೆತ್ತಿರುವ ಬಗ್ಗೆ ತಿಳಿಸಿದ್ದಾರೆ.

ಇದು ಅವರ ದಿನನಿತ್ಯದ ಕಾಯಕವಾಗಿದ್ದು, ಹಲವಾರು ಬಾರಿ ಮುಳುಗೇಳಿರುವ ಈಶ್ವರ್ ಅವರಿಗೆ ಮಲ್ಪೆ ಬಂದರಿನ ಮೂಲೆ ಮೂಲೆಯೂ ಚಿರಪರಿಚಿತವಾಗಿದೆ. ಇದುವರೆಗೆ 100 ದೇಹಗಳನ್ನು ಎತ್ತಿರುವ ಅವರು 65 ಜನರ ಪ್ರಾಣ ಉಳಿಸಿ ಆಪದ್ಬಾಂದವರಾಗಿದ್ದಾರೆ. ಇತ್ತೀಚೆಗೆ ಅರಶಿನಗುಂಡಿ ಜಲಪಾತ ವೀಕ್ಷಣೆ ಸಂದರ್ಭ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಶರತ್ ಮೃತ ದೇಹ ಪತ್ತೆ ಮಾಡುವಲ್ಲಿಯೂ ಅವರು ಸಹಕರಿಸಿದ್ದರು. ಇವರು ತಮ್ಮದೇ ಆದ ಒಂದು ಆಂಬ್ಯುಲೆನ್ಸ್ ಸೇವೆಯನ್ನೂ ಒದಗಿಸುತ್ತಿದ್ದಾರೆ ಎಂದು ಟಿಒಐ ವರದಿ ಹೇಳಿದೆ.