ಉಡುಪಿ: ಜಿಲ್ಲೆಯ ಬಿಜೆಪಿ ರೈತ ಮೋರ್ಚಾವು ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಪಕ್ಷದ
ಕಾರ್ಯಕರ್ತರು ರೈತಾಪಿ ವರ್ಗ ಮತ್ತು ಸರಕಾರದ ನಡುವೆ ಕೊಂಡಿಯಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕರೆ ನೀಡಿದರು.
ಅವರು ಬುಧವಾರ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ರೈತ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ಅಧ್ಯಕ್ಷೀಯ ಅವಧಿಯಲ್ಲಿ 4 ಬಾರಿ ಉಡುಪಿ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದೇನೆ. ನಾವು ಆಡಳಿತ
ಪಕ್ಷವಾದ ಬಿಜೆಪಿ ಕಾರ್ಯಕರ್ತರಾಗಿ ಸರಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರಧಾನಿ ಮೋದಿ ಆಶಯದಂತೆ ಶತಮಾನ ವರ್ಷದ ಸಂದರ್ಭದಲ್ಲಿ ದೇಶವು ಇನ್ನಷ್ಟು ಸದೃಢವಾಗಿ ಆತ್ಮನಿರ್ಭರವಾಗಬೇಕು.
ಮುಂದಿನ ಚುನಾವಣೆಗಳಲ್ಲಿ ರೈತ ಮೋರ್ಚಾದ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಜನಸೇವೆಯ ಮೂಲಕ ಪಕ್ಷ ಸಂಘಟನಾ ಕಾರ್ಯದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ನಿರಂತರ ಚಟುವಟಿಕೆಗಳೊಂದಿಗೆ ಪಕ್ಷದ ಅಭ್ಯರ್ಥಿಗಳ ಪ್ರಚಂಡ ವಿಜಯಕ್ಕೆ ಕಟಿಬದ್ಧರಾಗಿ ಶ್ರಮಿಸಬೇಕು ಎಂದರು.
ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕೈ ಪ್ರಾಸ್ತಾವಿಕವಾಗಿ ಮಾತನಾಡಿ ಪಕ್ಷದ ಕಾರ್ಯಕರ್ತರು ತಳಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರೈತರ ಶ್ರೇಯೋಭಿವೃದ್ಧಿಯ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು.
ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ರಾಜ್ಯ ಸಾವಯವ ಕೃಷಿ ನಿರ್ದೇಶಕ ರಾಘವೇಂದ್ರ ಉಪ್ಪೂರು ಮಾತನಾಡಿ ರೈತ ಮೋರ್ಚಾದ ಪ್ರತಿಯೊಬ್ಬ ಪದಾಧಿಕಾರಿ, ಸದಸ್ಯರು ತಮ್ಮ ಜವಾಬ್ದಾರಿಗಳ ಮಹತ್ವವನ್ನು ಅರಿತು ಕೆಲಸ ಕಾರ್ಯಗಳನ್ನು ನಿರ್ವಹಿಸಿ, ಪಕ್ಷ ಸಂಘಟನೆಗೆ ಶಕ್ತಿ ತುಂಬಬೇಕು ಎಂದರು.
ಉಡುಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ಮಾತನಾಡಿ ಜಿಲ್ಲಾ ರೈತ ಮೋರ್ಚಾ ನಿಯಮಿತ ಸಭೆಗಳು ಹಾಗೂ ನಿರಂತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮಂಡಲವಾರು ಗ್ರಾಮ ಮಟ್ಟದಲ್ಲಿ ರೈತ ಉತ್ಪಾದಕ ಸಂಘವನ್ನು ಪ್ರಾರಂಭಿಸುವ ಕೆಲಸ ಕಾರ್ಯ ಪ್ರಗತಿಯಲ್ಲಿದೆ. ಸರಕಾರದಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಜಾರಿಯಲ್ಲಿದೆ ಎಂದರು.
ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ರೈತ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು, ಸಮಿತಿ ಹಾಗೂ ಕಾರ್ಯಕಾರಿಣಿ
ಸದಸ್ಯರು, ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಧೀರಜ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.