ಇಂಗ್ಲಿಷ್ ಕಲಿಕೆ ಇಂದಿನ ಅಗತ್ಯ: ಶಾಸಕ ಲಾಲಾಜಿ ಮೆಂಡನ್

ಹಿರಿಯಡಕ: ಅಂತರರಾಷ್ಟ್ರೀಯ ಸಂವಹನಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಕಲಿಯುವುದು ಇಂದಿನ ಅನಿವಾರ್ಯ. ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆ ಜತೆಗೆ ಆಂಗ್ಲ ಮಾಧ್ಯಮಕ್ಕೂ ಒತ್ತು ನೀಡುವ ಅಗತ್ಯವಿದೆ. ಹಾಗಾಗಿ ಕಾಜಾರಗುತ್ತು ಶಾಲೆಯಲ್ಲಿ ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುವುದು ಎಂದು
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಅವರು ಇಂದು ಕಾಜಾರಗುತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಕೆ. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಬೇಡಿಕೆ ಇದೆ ಎಂಬುದನ್ನು ಅರ್ಥ ಮಾಡಿಕೊಂಡು ಸರ್ಕಾರದಿಂದಲೂ ಅನುಮತಿಯನ್ನು ನೀಡಲು ಆರಂಭಿಸಲಾಗಿದೆ. ಕಳೆದ ವರ್ಷದಲ್ಲಿ ಉಡುಪಿ ವಲಯದಲ್ಲಿ ರಾಜೀವ ನಗರ, ಒಳಕಾಡು, ಹಿರಿಯಡಕ ಹಾಗೂ ಪಡುಬಿದ್ರಿ ಶಾಲೆಗಳಿಗೆ ಆಂಗ್ಲ ಮಾಧ್ಯಮದ ಬೋಧನೆಗೆ ಅವಕಾಶ ನೀಡಲಾಗಿದೆ.

ಪ್ರತಿ ವರ್ಷವೂ ಈ ರೀತಿಯ ಅನುಮೋದನೆಗೆ ಅವಕಾಶ ಸಿಕ್ಕಿದಲ್ಲಿ ಕಾಜಾರಗುತ್ತು ಶಾಲೆಯನ್ನು ಮೊದಲು ಪರಿಗಣಿಸಲಾಗುವುದು. ಶಾಲೆಯ ಹಳೆ ವಿದ್ಯಾರ್ಥಿಗಳು, ಊರಿನ ಹಿರಿಯರು, ದಾನಿಗಳು ಕೈ ಜೋಡಿಸಿ ಇದೊಂದು ಉತ್ತಮ ಕಾರ್ಯವನ್ನು, ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ
ಸಂಧ್ಯಾ ಕಾಮತ್, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಉದ್ಯಮಿ ಕುಯಿಲಾಡಿ ಸುರೇಶ್ ನಾಯಕ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ್ ಶೆಟ್ಟಿ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲ್ಪೆ ರಾಘವೇಂದ್ರ, ಪಿ. ಮುರುಳೀಧರ್, ಗೌರಿ ಕೆ, ಶಾಲಾ ಮುಖ್ಯೋಪಾಧ್ಯಾಯ ಸಾಧು,
ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ದೇವೇಂದ್ರ ಪ್ರಭು, ಅನಿಲ್ ಶೆಟ್ಟಿ ಮಾಂಬೆಟ್ಟು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.