ಈ ಬಾರಿಯೂ ಕಪ್ ತರಲಿಲ್ಲ: ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತದೆದುರು 10 ವಿಕೆಟ್ ಗಳಿಂದ ಗೆಲುವು ಸಾಧಿಸಿದ ಇಂಗ್ಲೆಡ್

ಗುರುವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ರ ಎರಡನೇ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತವು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಎದುರು 10 ವಿಕೆಟ್ ಗಳಿಂದ ಸೋತು ಫೈನಲ್ ಪಂದ್ಯದಿಂದ ಹೊರಗುಳಿದಿದೆ. ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಹೇಲ್ಸ್ ಮತ್ತು ಬಟ್ಲರ್ ಭಾರತದ 168 ರನ್ ಗಳ ಗುರಿಯನ್ನು ಕೇವಲ 16 ಓವರ್ ಗಳಲ್ಲಿ ಶೂನ್ಯ ವಿಕೆಟ್ ನಷ್ಟಕ್ಕೆ ಗೆದ್ದು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ 10 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಈವರೆಗೆ ಉಭಯ ತಂಡಗಳು ಕೇವಲ ಮೂರು ಬಾರಿ ಪರಸ್ಪರ ಮುಖಾಮುಖಿಯಾಗಿವೆ. 2007, 2009 ಮತ್ತು 2012ರ ಮುಖಾಮುಖಿಗಳಲ್ಲಿ ಭಾರತವು 2 ರಲ್ಲಿ ಗೆದ್ದಿತ್ತು. ಬಹಳ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ತಂಡದ ಸೋಲು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ನಿರಾಸೆಯ ಕಡಲಲ್ಲಿ ಮುಳುಗಿಸಿದೆ. ಭಾರತ ತಂಡವು ಈ ಬಾರಿಯೂ ಕಪ್ ತರದೆ ಬರಿಗೈಯಲ್ಲೆ ಮರಳಿರುವುದಕ್ಕೆ ಕ್ರಿಕೆಟ್ ಪ್ರೇಮಿಗಳು ಖೇದ ವ್ಯಕ್ತಪಡಿಸುತ್ತಿದ್ದಾರೆ.

ಭಾರತ ಕ್ರಿಕೆಟ್ ತಂಡವು 2007 ರ ಉದ್ಘಾಟನಾ ಆವೃತ್ತಿಯಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಒಮ್ಮೆ ಗೆದ್ದಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ, ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಭಾರತವು ಐದು ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ಕಪ್ ಅನ್ನು ಮನೆಗೆ ತಂದಿತ್ತು.

ನ.13 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವು ಇಂಗ್ಲೆಂಡ್ ಅನ್ನು ಎದುರಿಸಲಿದೆ.