ನಿಟ್ಟೆ: ‘ತಾಂತ್ರಿಕ ಜ್ಞಾನದೊಂದಿಗೆ ಸಂವಹನ ಚಾತುರ್ಯತೆ ಬೆಳೆಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅತಿಮುಖ್ಯ’ ಎಂದು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಕಾಲೇಜಿನ ಎಡ್ಮಿನಿಸ್ಟ್ರೇಟರ್ ರೋಹಿತ್ ಪೂಂಜಾ ಅಭಿಪ್ರಾಯಪಟ್ಟರು.
ಅವರು ಸೆ.೧೫ ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದರು.
ಪ್ರತೀ ಕ್ಷೇತ್ರದಲ್ಲೂ ದಿನೇದಿನೇ ನಾವಿನ್ಯತೆಯನ್ನು ಕಾಣಬಹುದಾಗಿದ್ದು ಇಂದಿನ ದಿನಗಳಲ್ಲಿ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಸರ್.ಎಂ ವಿಶ್ವೇಶ್ವರಯ್ಯರಂತಹ ಮಹಾನ್ ಚೇತನ ನಮ್ಮ ಬದುಕಿಗೆ ಆದರ್ಶಪ್ರಾಯರಾಗಿರುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಮಾತನಾಡಿ, ಸರ್ ಎಂ ವಿಶ್ವೇಶ್ವರಯ್ಯನವರ ಮೌಲ್ಯಯುತ ಜೀವನ, ತತ್ವ ಹಾಗೂ ಕಾರ್ಯಬದ್ಧತೆ ನಮಗೆ ಮಾದರಿಯಾಗಬೇಕಾಗಿದೆ. ಪರಿಸ್ಥಿತಿಗೆ ತಕ್ಕಂತೆ ನಾವು ಸಾಂಪ್ರದಾಯಿಕ ಕ್ಲಾಸ್ರೂಮ್ ಶಿಕ್ಷಣದೊಂದಿಗೆ ಆನ್ಲೈನ್ ಶಿಕ್ಷಣವನ್ನು ನೀಡುವ ಅನಿವಾರ್ಯತೆ ಬಂದೊದಗಿದೆ. ಇಂಜಿನಿಯರ್ಗಳ ಕಾರ್ಯ ಸಮಾಜಕ್ಕೆ ಉಪಯುಕ್ತವಾಗಬೇಕು ಎಂದರು.
ಈ ಸಂದರ್ಭದಲ್ಲಿ ಎನ್.ಎಂ.ಎ.ಎಂ.ಐ.ಟಿ ಯ ನ್ಯೂಸ್ ಬುಲೆಟಿನ್ನ್ನು ಬಿಡುಗಡೆಗೊಳಿಸಲಾಯಿತು. ತಾಂತ್ರಿಕ ಕಾಲೇಜಿನ ವಿವಿಧ ಕಟ್ಟಡಗಳಿಗೆ ಸರ್ ಸಿ.ವಿ ರಾಮನ್, ಎಸ್. ರಾಮಾನುಜನ್, ಎ.ಪಿ.ಜೆ ಕಲಾಮ್ ಹಾಗೂ ಅಟಲ್ ಬ್ಲಾಕ್ಗಳು ಎಂದು ಕಳೆದ ಸಾಲಿನಲ್ಲಿ ಹೆಸರಿಸಿರುವ ಸಲುವಾಗಿ ಅವರ ಭಾವಚಿತ್ರಗಳನ್ನು ಆಯಾ ಕಟ್ಟಡಗಳಲ್ಲಿರಿಸಲು ಸಂಸ್ಥೆಯ ವತಿಯಿಂದ ರೆಸಿಡೆಂಟ್ ಇಂಜಿನಿಯರ್ ಡಾ.ಶ್ರೀನಾಥ್ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು. ೨೦೧೯-೨೦೨೦ ನೇ ಸಾಲಿನಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ನ್ನು ಸಂಪನ್ನಗೊಳಿಸಿದ ಡಾ.ಅಜಿತ್ ಹೆಬ್ಬಾಳೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಬಿ.ಆರ್, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ನೋಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ| ಐ ರಮೇಶ್ ಮಿತ್ತಂತಾಯ ಸ್ವಾಗತಿಸಿದರು. ಸಂಸ್ಥೆಯ ರೆಸಿಡೆಂಟ್ ಇಂಜಿನಿಯರ್ ಡಾ.ಶ್ರೀನಾಥ್ ಶೆಟ್ಟಿ ಅವರು ಇಂಜಿನಿಯರ್ಸ್ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಡಾ.ಉದಯ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಭಟ್ ವಂದಿಸಿದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣರಾಜ ಜೋಯಿಸ ಎ ಕಾರ್ಯಕ್ರಮ ನಿರೂಪಿಸಿದರು.