ಉಡುಪಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ- 2023 ಕ್ಕೆ ಸಂಬಂಧಿಸಿದಂತೆ, ಮೇ 10 ರಂದು ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗೆ ಶಸ್ತ್ರಾಸ್ತ್ರ, ಆಯುಧ ಮತ್ತು ಮದ್ದುಗುಂಡುಗಳೊಂದಿಗೆ ಸಂಚಾರ ಹಾಗೂ ಅವುಗಳನ್ನು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ.
ಆತ್ಮ ರಕ್ಷಣೆ ಮತ್ತು ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಅಧಿಕೃತ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ವಿಧಧ ಶಸ್ತ್ರಾಸ್ತ್ರಗಳನ್ನು (ಎಸ್‌ಬಿಬಿಎಲ್, ಡಿಬಿಬಿಎಲ್, ಎಸ್‌ಬಿಎಂಎಲ್, ಡಿಬಿಎಂಎಲ್, ಎನ್‌ಪಿಬಿ ರೈಫಲ್, ರಿವಾಲ್ವರ್ ಹಾಗೂ ಪಿಸ್ತೂಲ್) ತಮ್ಮ ವಿಳಾಸ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತವಾಗಿ ಪರವಾನಿಗೆ ಹೊಂದಿರುವ ಡೀಲರ್ ಶಾಪ್‌ಗಳಲ್ಲಿ ಕಡ್ಡಾಯವಾಗಿ ವಿಳಂಬ ಮಾಡದೇ ಠೇವಣಿ ಮಾಡಿ, ರಶೀದಿ ಪಡೆಯಬೇಕು.
ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಒಂದು ವಾರದ ನಂತರ ಶಸ್ತ್ರಾಸ್ತ್ರ ಠೇವಣಿ ಪಡೆದ ಠಾಣಾಧಿಕಾರಿಗಳಿಂದ ಅಥವಾ ಡೀಲರ್‌ಗಳಿಂದ ಶಸ್ತ್ರಾಸ್ತ್ರಗಳನ್ನು ಮರು ಪಡೆದುಕೊಳ್ಳಬಹುದು.
ಈ ನಿಷೇಧ ಆದೇಶವು ಸರ್ಕಾರಿ ಕರ್ತವ್ಯಕ್ಕೆ ಹಾಗೂ ಬ್ಯಾಂಕ್ ಸೆಕ್ಯೂರಿಟಿ ಸಂಸ್ಥೆಗಳ ಭದ್ರತೆ ಹಾಗೂ ಸಂರಕ್ಷತಾ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ವೇಳೆ ಶಸ್ತ್ರಾಸ್ತ್ರ ಆಯುಧ ಬಳಸುವುದಕ್ಕೆ ಅನ್ವಯವಾಗುವುದಿಲ್ಲ.
ಸದರಿ ಠೇವಣಿ ಆದೇಶದಿಂದ ವಿನಾಯಿತಿ ಕೋರುವ ಪರವಾನಿಗೆದಾರರು ಏಪ್ರಿಲ್ 5 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ಅರ್ಜಿಗಳನ್ನು ಸ್ಕ್ರೀನಿಂಗ್ ಸಮಿತಿ ಸದಸ್ಯರಾದ ಪೊಲೀಸ್ ಅಧೀಕ್ಷಕರ ಕಮಿಟಿ ಮುಂದೆ ಮಂಡಿಸಿ, ಅರ್ಜಿಗಳ ಅವಶ್ಯಕತೆ ಹಾಗೂ ನೈಜ್ಯತೆಯ ಬಗ್ಗೆ ಪರಿಶೀಲಿಸಿ, ವಿನಾಯಿತಿ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು.
ಆದೇಶಕ್ಕೆ ವ್ಯತಿರಿಕ್ತವಾಗಿ ಹಾಗೂ ಯಾವುದೇ ರೀತಿಯ ಕಾನೂನು ಬಾಹಿರವಾಗಿ ಪರವಾನಿಗೆ ರಹಿತ ಶಸ್ತ್ರಾಸ್ತ್ರ /ಆಯುಧ ಇತ್ಯಾದಿಗಳ ಸಂಗ್ರಹಣೆ, ಬಳಕೆ, ಸಾಗಾಟ ಮಾಡುತ್ತಿರುವ ಸುಳಿವು ದೊರೆತಲ್ಲಿ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.