ಉಡುಪಿ: ಲಕ್ಷ್ಮೀವರರ್ತೀರ್ಥ ಶ್ರೀಪಾದರ ಕನಸಿನ ಯೋಜನೆಯಾಗಿದ್ದ ಕಲ್ಸಂಕದ ಕನಕ ಮಾಲ್ ಯೋಜನೆ ಕಡೆಗೂ ಪೂರ್ಣಗೊಳ್ಳುವ ಲಕ್ಷಣ ಗೋಚರಿಸಿದೆ. ಲಕ್ಷ್ಮೀವರತೀರ್ಥ ಶ್ರೀಗಳ ಅಗಲಿಕೆಯ ಬಳಿಕ ಶಿರೂರು ಮಠದ ಸಂಪೂರ್ಣ ನಿರ್ವಹಣೆಯನ್ನು ವಹಿಸಿಕೊಂಡಿರುವ ಜಂಟಿ ಮಠ ಸೋದೆ ಮಠವು ಕನಕ ಮಾಲ್ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮಕೈಗೊಂಡಿದೆ.
ಇಂದು ಉಡುಪಿ ಶಿರೂರು ಮಠದಲ್ಲಿ ಪಲಿಮಾರು ಮಠದ ವಿದ್ಯಾಧೀಶ ಶ್ರೀಪಾದರು ಹಾಗೂ ಸೋದೆ ಮಠದ ವಿಶ್ವವಲ್ಲಭ ಶ್ರೀಪಾದರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಠದ ಲೆಕ್ಕಪರಿಶೋಧಕ ಕೆ. ಗೌತಮ್ ಮಾಹಿತಿ ನೀಡಿದರು.
ಮಾಲ್ ಬಗ್ಗೆ ಉಂಟಾಗಿದ್ದ ವಿವಾದವು ಕೊನೆಗೊಳ್ಳುವ ಸಂಪೂರ್ಣ ಆಶಾಕಿರಣ ಮೂಡಿಬಂದಿದೆ. ಶಿರೂರು ಮಠದ ಸಂಪೂರ್ಣ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಂಗ ಪ್ರಕ್ರಿಯೆಗಳಿಗಾಗಿ ನ್ಯಾಯಾಂಗ ತಜ್ಞರ ಸಲಹೆ ಪಡೆದುಕೊಳ್ಳಲಾಗಿದ್ದು, ಮೊದಲ ಹಂತದ ಪ್ರಕ್ರಿಯೆ ಸಹ ಮುಗಿದಿದೆ ಎಂದರು.
ಮಠದ ಭಕ್ತರು ಆದ ಮುಂಬೈನ ಉದ್ಯಮಿಯೊಬ್ಬರು ಜಂಟಿ ಅಭಿವೃದ್ಧಿ ಒಪ್ಪಂದದ ಆಧಾರದಲ್ಲಿ ಅರ್ಧದಲ್ಲಿ ಸ್ಥಗಿತಗೊಂಡಿರುವ ಕಲ್ಸಂಕದ ಕನಕ ಮಾಲ್ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮಾಲ್ ನ ಎಂಟು ಮಹಡಿಗಳ ಪೈಕಿ ಮೇಲಿನ ನಾಲ್ಕು ಮಹಡಿಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿ ಶಿರೂರು ಮಠಕ್ಕೆ ಹಸ್ತಾಂತರ ಮಾಡಲಿದ್ದಾರೆ ಎಂದರು.
ಕಟ್ಟಡ ಸ್ಥಗಿತಗೊಂಡಿರುವ ಕಾರಣ ಕಾರ್ಪೋರೇಷನ್ ಬ್ಯಾಂಕ್ ನಲ್ಲಿರುವ ಬಾಕಿಯಿರುವ ₹ 10 ಕೋಟಿ ಸಾಲ ಹಾಗೂ ಮಾಲ್ ನಲ್ಲಿ ವಾಣಿಜ್ಯ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದ ಉದ್ಯಮಿಗಳಿಗೆ ಅಂದಾಜು ₹ 10 ಕೋಟಿ ಹಣ ಪಾವತಿಲು ಬಾಕಿಯಿದ್ದು, ಅದನ್ನು ಉದ್ಯಮಿ ಭರಿಸಲಿದ್ದಾರೆ. ಕಟ್ಟಡ ಕಾಮಗಾರಿಯನ್ನು ವಹಿಸಿಕೊಂಡಿರುವ ಗುತ್ತಿಗೆದಾರರ ಪಾವತಿಸಲು ಬಾಕಿ ಇರುವ ₹1.50 ಕೋಟಿ ಮೊತ್ತವನ್ನು ಅವರೇ ಭರಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನು ಹೊರತುಪಡಿಸಿ ಐದು ಕೋಟಿ ಮೊತ್ತವನ್ನು ಶಿರೂರು ಮಠಕ್ಕೆ ನೀಡಲು ಅವರು ಒಪ್ಪಿದ್ದಾರೆ ಎಂದರು.
ಸದ್ಯ ಹತ್ತು ಮಂದಿ ಮುಂಗಡವಾಗಿ ವಾಣಿಜ್ಯ ಕೊಠಡಿ ಕಾಯ್ದಿರಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಂತೆ ಹತ್ತು ಮಂದಿಗೆ ₹ 10 ಕೋಟಿ ಮೊತ್ತ ಪಾವತಿಸಲಿದ್ದಾರೆ. ಇನ್ಮುಂದೆ ಯಾರಾದ್ರೂ ನಾವು ಮುಖಂಡವಾಗಿ ಕೊಠಡಿ ಕಾಯ್ದಿರಿಸಿದ್ದೇವೆಂದು ಬಂದರೆ ಅವರಿಗೆ ಮಠಕ್ಕೆ ನೀಡುವ ಐದು ಕೋಟಿ ಮೊತ್ತದಲ್ಲಿ ಪಾವತಿಸಲಾಗುವುದು ಎಂದು ಹೇಳಿದರು.