ಪಡುಬಿದ್ರಿ ಬ್ಲೂಫ್ಲ್ಯಾಗ್‌ ಬೀಚ್‌ ನಿರ್ವಹಣೆಯಲ್ಲಿ ಅಕ್ರಮ: ಜಿಲ್ಲಾಧಿಕಾರಿಗೆ ದೂರು ನೀಡಿದ ಉದ್ಯೋಗಿಗಳು

ಪಡುಬಿದ್ರಿ: ಅಂತಾರಾಷ್ಟ್ರೀಯ ಮಾನ್ಯತೆಯ ಪಡುಬಿದ್ರಿ ಬ್ಲೂಫ್ಲ್ಯಾಗ್‌ ಬೀಚ್‌ನ ಉದ್ಯೋಗಿಗಳು ಗುರುವಾರ ಕರ್ತವ್ಯಕ್ಕೆ ಗೈರಾಗಿ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬ್ಲೂಫ್ಲ್ಯಾಗ್‌ ಬೀಚ್‌ ನಿರ್ವಹಣೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಕೆಲಸದ ವಾತಾವರಣ ಹದಗೆಟ್ಟಿದ್ದು, ಬೋಟಿಂಗ್‌ಗೆ ನಕಲಿ ರಶೀದಿಗಳನ್ನು ಮುದ್ರಿಸಿ ಹಣ ವಸೂಲು ಮಾಡಲಾಗುತ್ತಿದೆ. ವಸೂಲಾದ ಹಣವು ಪ್ರವಾಸೋದ್ಯಮ ಇಲಾಖೆಯ ಖಾತೆಗೆ ಜಮೆಯಾಗದೆ ಓರ್ವರ ಖಾಸಗಿ ಖಾತೆಗೆ ಜಮೆಯಾಗುತ್ತಿದೆ. ಈ ಕುರಿತು ಈ ಹಿಂದೆ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಿಗೂ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ ಎಂದು ದೂರಿರುವ ಉದ್ಯೋಗಿಗಳು ಜಿಲ್ಲಾಧಿಕಾರಿಗೆ ಮನವಿಗೆ ನೀಡಿದ್ದಾರೆ. ಒಟ್ಟು 31 ಉದ್ಯೋಗಿಗಳು ನ್ಯಾಯ
ಕ್ಕಾಗಿ ಮೊರೆಯಿಟ್ಟಿದ್ದು, ಇಬ್ಬರು ಮೇಲ್ವಿಚಾರಕರು ಜೀವಭಯ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.