ಕಾಪು ಪುರಸಭೆ ಕಟ್ಟಡಕ್ಕೆ ಬೀಗ ಹಾಕಿ ಹೋದ ನೌಕರ: ಸಿಬ್ಬಂದಿ ಒಳಗೆಯೇ ಲಾಕ್!

ಉಡುಪಿ: ಪುರಸಭೆ ಸಿಬ್ಬಂದಿಯ ಅಚಾತುರ್ಯದಿಂದಾಗಿ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯೊಳಗೆ ದಿಗ್ಬಂಧನ ಒಳಗಾದ ಘಟನೆ ಕಾಪುವಿನಲ್ಲಿ ನಡೆದಿದೆ.

ಕಾಪು ಪುರಸಭೆ ಕಟ್ಟಡದಲ್ಲಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಯು ನಿರ್ವಹಿಸುತ್ತಿದ್ದು ಎರಡು ಕಚೇರಿಗಳಿಗೆ ತೆರಳಲು ಒಂದೇ ದ್ವಾರ ಇರುವುದರಿಂದ ಹೀಗಾಗಿದೆ ಎಂದು ಹೇಳಲಾಗುತ್ತಿದೆ‌.
ಸಾಮಾನ್ಯವಾಗಿ ಪುರಸಭೆ ಸಿಬ್ಬಂದಿಗಳು ಸಂಜೆ 5:30 ರಿಂದ 6 ಗಂಟೆಯ ಒಳಗೆ ಬೀಗ ಹಾಕಿ ತೆರಳುತ್ತಾರೆ. ಈ ವೇಳೆ ಪ್ರಾಧಿಕಾರದ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರೆ ಅವರನ್ನು ಕಚೇರಿಯ ಬಾಗಿಲು ಹಾಕಿರುವ ಬಗ್ಗೆ ಮಾಹಿತಿ ನೀಡಿ ಕಳುಹಿಸಲಾಗುತ್ತಿತ್ತು. ಆದರೆ ಪ್ರತಿದಿನ ಬೀಗ ಹಾಕುವ ಸಿಬ್ಬಂದಿ ಅನಾರೋಗ್ಯದ ಕಾರಣದಿಂದಾಗಿ ಬೇಗನೆ ಮನೆಗೆ ಹೋಗಿದ್ದು, ಅವರ ಬದಲಿಗೆ ಬೀಗ ಹಾಕಬೇಕಿದ್ದ ಸಿಬ್ಬಂದಿ ಪ್ರಥಮ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಧಿಕಾರದ ಸಿಬ್ಬಂದಿಗಳ ಬಗ್ಗೆ ಗಮನಕೊಡದೆ ಸೀದಾ ಬಾಗಿಲು ಹಾಕಿ ನಿರ್ಗಮಿಸಿದ್ದರು.

ಪ್ರಾಧಿಕಾರದ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ತಮ್ಮ ಕೆಲಸ ಮುಗಿಸಿ ವಾಪಸ್ ಆಗುವ ವೇಳೆ ಮುಖ್ಯ ದ್ವಾರಕ್ಕೆ ಬೀಗ ಹಾಕಿರುವುದು ಗಮನಕ್ಕೆ ಬಂದಿದ್ದು ಕ್ಷಣಕಾಲ ಗೊಂದಲ ಉಂಟಾಯಿತು. ಕೆಲವರು ಆತಂಕ ಕೊಳಗಾಗಿ ಪೋಲಿಸ್ ಇಲಾಖೆಗೂ ಮಾಹಿತಿ ನೀಡಿದ್ದರು.
ವಿಷಯ ತಿಳಿದ ಪುರಸಭೆಯ ಮುಖ್ಯಾಧಿಕಾರಿಯವರು, ಬೀಗ ಹಾಕಿ ತೆರಳಿದ್ದ ಸಿಬ್ಬಂದಿಯನ್ನು ಕಳುಹಿಸಿ ಬಾಗಿಲು ತೆಗೆಸಿಕೊಡುವ ವ್ಯವಸ್ಥೆ ಮಾಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.