ಪ್ರವಾಸೋದ್ಯಮದಲ್ಲಿ ಸ್ಥಳೀಯ ಪರಂಪರೆಗೆ ಒತ್ತು ನೀಡಿ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಉಡುಪಿ: ಕರಾವಳಿ ಪ್ರವಾಸೋದ್ಯಮ ಕ್ಷೇತ್ರಗಳನ್ನು ಪ್ರವಾಸಿಗರ ಅಗತ್ಯಕ್ಕೆ ತಕ್ಕಂತೆ ಸ್ಥಳೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಕಲೆಗಳಿಗೆ ಒತ್ತು ನೀಡಿ ಅಭಿವೃದ್ಧಿಗೊಳಿಸುವುದರೊಂದಿಗೆ ಜನಾಕರ್ಷಣೆಗೊಳಿಸಬೇಕು ಎಂದು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಬುಧವಾರ ನಗರದ ಅಜ್ಜರಕಾಡು ಪುರಭವನದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯ ರಮಣೀಯ ಪ್ರಕೃತಿ ಸೌಂದರ್ಯ, ಕಡಲ ತೀರ, ಇಲ್ಲಿನ ಸಂಸ್ಕೃತಿ, ಜನಪದ, ಯಕ್ಷಗಾನ, ಭೂತದ ಕೋಲ, ನಾಗಾರಾಧನೆ ಮತ್ತಿತರ ಧಾರ್ಮಿಕ ಉತ್ಸವಗಳು ಜನಾಕರ್ಷಿಣೀಯವಾಗಿ, ಪ್ರವಾಸಿಗರು ಒಮ್ಮೆ ನೋಡಿದರೆ ಮತ್ತೊಮ್ಮೆ ತಮ್ಮ ಕುಟುಂಬದ ಸಮೇತ ಬಂದು ನೋಡುವಂತೆ ಆಕರ್ಷಿಸುತ್ತಿದೆ. ಇದಕ್ಕೆ ಪೂರಕವಾಗಿ ನಮ್ಮ ಪರಂಪರೆ ಒಳಗೊಂಡಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು ಎಂದರು.

ನಮ್ಮ ಪರಂಪರೆಯನ್ನು ಸಂರಕ್ಷಿಸುವುದು ಹಾಗೂ ಪ್ರವಾಸಿ ತಾಣಗಳನ್ನು ಪ್ರವಾಸಿ ಪರಿಸರ ಸ್ನೇಹಿಯಾಗಿ ಮಾಡಿ, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರವಾಸೊದ್ಯಮದ ಮೂಲಕ ಹೆಚ್ಚು ಉದ್ಯೋಗವನ್ನು ಸೃಜಿಸುವುದರಿಂದ ಸ್ಥಳೀಯರಿಗೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಪ್ರವಾಸಿಗಳ ಆತಿಥ್ಯಕ್ಕೆ ಹೋಂಸ್ಟೇಗಳನ್ನು ಇನ್ನೂ ಹೆಚ್ಚಿಸಬೇಕು. ಅಲ್ಲಿ ಸ್ಥಳೀಯ ಪರಂಪರೆಗೆ ಒತ್ತು ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಉಡುಪಿ ಜಿಲ್ಲೆಯು ಪ್ರವಾಸೋದ್ಯಮದಲ್ಲಿ ಖ್ಯಾತಿ ಹೊಂದಿದ್ದು, ಇಲ್ಲಿನ ಒಂದೆಡೆ ಕಡಲ ತೀರ ಇಂನ್ನೊದೆಡೆ ಹಸಿರು ಹೊದಿಕೆ ಹೊದ್ದ ಪಶ್ಚಿಮ ಘಟ್ಟಗಳ ಶ್ರೇಣಿ ಹಳ್ಳ, ಕೊಳ್ಳ ಧಾರ್ಮಿಕ ಕ್ಷೇತ್ರ ಹಾಗೂ ಶೈಕ್ಷಣಿಕ ಹಬ್ಬನ್ನು ಹೊಂದಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪರಿಸರಕ್ಕೆ ಪೂರಕವಾಗಿ ಪ್ರವಾಸೋದ್ಯಮವನ್ನು ಬೆಳೆಸಬೇಕು ಎಂದರು.

ಇತ್ತೀಚಿನ ದಿವಸಗಳಲ್ಲಿ ಪ್ರವಾಸೋದ್ಯಮವು ಉದ್ಯಮವಾಗಿ ಬೆಳೆದಿದ್ದು, ನಾವು ಪರಿಸರದಲ್ಲಿ ಸಂಭವಿಸುವ ಏರು-ಪೇರುಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮವನ್ನು ಬೆಳೆಸಬೇಕು. ತತ್ವಶಾಸ್ತಜ್ಞರ ವಾಕ್ಯದಂತೆ ಭೂಮಿ ಇರುವುದು ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಹೊರತು ಆತನ ದುರಾಸೆಗಳನ್ನು ಪೂರೈಸುವುದಕ್ಕಲ್ಲ. ಆದ್ದರಿಂದ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದ್ದು ಭೂಮಿ ಇರುವುದು ಬರೀ ಮನುಷ್ಯನಿಗೋಸ್ಕರವಲ್ಲ. ಎಲ್ಲಾ ಜೀವ ಸಂಕುಲಗಳಿಗೆ ಭೂಮಿ ಸಂಬಂಧಿಸಿದೆ ಎಂದರು.

ಕೋವಿಡ್‌ನಿಂದಾಗಿ ಸಾಕಷ್ಟು ಕಾಳಜಿಯಲ್ಲಿ ಜೀವನ ನಡೆಸಿದ್ದು, ಪುನಃ ವಾಸ್ತವ ಸ್ಥಿತಿಯನ್ನು ಮರೆತು ಹಳೆಯ ಸ್ಥಿತಿಗೆ ಮರಳುತ್ತಿದ್ದೇವೆ. ಸೋಲಾರ್ ಶಕ್ತಿ ಬಳಕೆ, ಕುಡಿಯುವ ನೀರಿನ್ನು ಮಲಿನಗೊಳಿಸದೇ ಇರುವುದು, ಕುಡಿಯುವ ನೀರಿಗೆ ತ್ಯಾಜ್ಯ ಸೇರದಂತೆ ನೋಡಿಕೊಳ್ಳುವುದು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವುದಕ್ಕೆ ಅಧಿಕಾರಿಗಳೊಂದಿಗೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಈ ಬಾರಿ ಮಳೆಯ ಕೊರತೆ ಇರುವ ಹಿನ್ನೆಲೆ, ಈಗಿನಿಂದಲೇ ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದರು.

ಪ್ರವಾಸೋದ್ಯಮ ಬೆಳೆಸಲು, ಪ್ರವಾಸಿಗರನ್ನು ಸೆಳೆಯಲು ಉಡುಪಿ ಜಿಲ್ಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತೊಮ್ಮೆ ಜಿಲ್ಲೆಗೆ ಭೇಟಿ ನೀಡಬೇಕು ಎಂಬ ಭಾವನೆ ಅವರಲ್ಲಿ ಮೂಡಬೇಕು. ಈ ನಿಟ್ಟಿನಲ್ಲಿ ಪರಿಸರಕ್ಕೆ ಪೂರಕವಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಅಗತ್ಯ ಎಂದರು.

ಮಣಿಪಾಲ ಡಬ್ಲ್ಯೂ.ಜಿ.ಎಸ್.ಹೆಚ್.ಎ ಗ್ರೂಪ್‌ನ ಪ್ರಾಂಶುಪಾಲ ಡಾ. ಶೆಫ್ ಕೆ ತಿರು ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಜಿಲ್ಲೆಯ ವಿವಿಧ 80 ಪ್ರವಾಸಿ ತಾಣದ ಕುರಿತು ಪುಸ್ತಕ ರಚನೆ ಮಾಡಲಾಗಿದ್ದು, ಆ ಪುಸ್ತಕದ ಮುಖಪುಟವನ್ನು
ಬಿಡುಗಡೆಗೊಳಿಸಲಾಯಿತು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆಯೋಜಿಸಿದ್ದ ರೀಲ್ಸ್ ಸ್ಫರ್ಧೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಸುಜನ್ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದು, ಅವರನ್ನು ಸನ್ಮಾನಿಸಲಾಯಿತು.

ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಎಂಬ ವಿಷಯದ ಕುರಿತು ವಿವಿಧ ಸ್ಫರ್ಧೆಗಳನ್ನು ವಿವಿಧ ತಾಲೂಕುಗಳ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು, ತಾಲೂಕುವಾರು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮನೋಹರ್ ಶೆಟ್ಟಿ, ಪೌರಾಯುಕ್ತ ರಾಯಪ್ಪ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸಿ.ಯು ಸ್ವಾಗತಿಸಿದರು.