ನವದೆಹಲಿ :”ಸಾಧನ ಬಳಕೆದಾರರ ಸೆಕೆಂಡುಗಳ ಬಳಕೆ” (device user seconds usage) ವಿಷಯದಲ್ಲಿ ಟ್ವಿಟರ್ ಸಾರ್ವಕಾಲಿಕ ಎತ್ತರವನ್ನು ತಲುಪಿದೆ. ಬಹುತೇಕ ಎಲ್ಲ ಜಾಹೀರಾತುದಾರರು ಹಿಂತಿರುಗಿ ಬಂದಿದ್ದಾರೆ ಅಥವಾ ಶೀಘ್ರ ಬರುವುದಾಗಿ ಹೇಳಿದ್ದಾರೆ ಎಂದು ಮಸ್ಕ್ ತಿಳಿಸಿದ್ದಾರೆ. ಟ್ವಿಟರ್ ಜಾಹೀರಾತು ಆದಾಯ ಶೇಕಡಾ 50 ರಷ್ಟು ಕುಸಿತವಾಗಿದೆ ಮತ್ತು ಹಿಂದಿನಿಂದ ಬಂದ ಭಾರಿ ಸಾಲಗಳು ಇನ್ನೂ ಬಾಕಿ ಇವೆ ಎಂದು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಹೇಳಿದ್ದಾರೆತಾವು ಭರವಸೆ ನೀಡಿದಂತೆ ಟ್ವಿಟರ್ನ ಕಂಟೆಂಟ್ ಕ್ರಿಯೇಟರ್ಗಳಿಗೆ ಹಣ ಪಾವತಿಗಳನ್ನು ಜಾರಿಗೊಳಿಸಿದ ನಂತರ ಮಸ್ಕ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
.ಟ್ವಿಟರ್ನ ಸಾಲದ ಹೊರೆ ಹೆಚ್ಚಾಗಿದ್ದು, ಆದಾಯ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.
ಮಸ್ಕ್ ಅವರು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಟ್ವಿಟರ್ನಿಂದ ದೂರವಾಗಿದ್ದ ಹಲವಾರು ಜಾಹೀರಾತುದಾರರು ಇನ್ನೂ ಮರಳಿ ಬಾರದ ಕಾರಣದಿಂದ ಟ್ವಿಟರ್ ಆರ್ಥಿಕವಾಗಿ ದುರ್ಬಲವಾಗಿದೆ. “ಜಾಹೀರಾತು ಆದಾಯದಲ್ಲಿ ಶೇಕಡಾ 50 ರಷ್ಟು ಕುಸಿತ ಮತ್ತು ಭಾರಿ ಸಾಲದ ಹೊರೆಯಿಂದಾಗಿ ನಾವು ಇನ್ನೂ ಆದಾಯದ ಕೊರತೆಯನ್ನು ಹೊಂದಿದ್ದೇವೆ” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. “ನಾವು ಬೇರೆ ಯಾವುದೇ ಐಷಾರಾಮಿ ಸೌಲಭ್ಯ ಹೊಂದುವ ಮೊದಲು ಧನಾತ್ಮಕ ಆದಾಯ ತಲುಪುವ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
ಮೆಟಾದ ಟೆಕ್ಸ್ಟ್ ಆಧಾರಿತ ಪ್ಲಾಟ್‌ಫಾರ್ಮ್ ಆಗಿರುವ ಥ್ರೆಡ್ ಪ್ರಾರಂಭವಾದಾಗಿನಿಂದ Twitterನಲ್ಲಿ ಬಳಕೆದಾರರ ಟ್ರಾಫಿಕ್ ಕಡಿಮೆಯಾಗುತ್ತಿದೆ. Threads ಕಳೆದ ವಾರ ಪ್ರಾರಂಭವಾದಾಗಿನಿಂದ ಈಗಾಗಲೇ 100 ಮಿಲಿಯನ್ ಸೈನ್ ಅಪ್‌ಗಳನ್ನು ಪಡೆದುಕೊಂಡಿದೆ. ವೆಬ್ ಅನಾಲಿಟಿಕ್ಸ್‌ನಲ್ಲಿ ಪರಿಣತಿ ಹೊಂದಿರುವ ಡೇಟಾ ಕಂಪನಿಯಾದ ಸಿಮಿಲರ್‌ವೆಬ್ ಪ್ರಕಾರ, ಥ್ರೆಡ್ಸ್ ಆರಂಭವಾದ ಮೊದಲ ಎರಡು ಪೂರ್ಣ ದಿನಗಳಲ್ಲಿ ಟ್ವಿಟರ್ ವೆಬ್ ಟ್ರಾಫಿಕ್ ಶೇಕಡಾ 5 ರಷ್ಟು ಕಡಿಮೆಯಾಗಿದೆ. 2022 ನೇ ಇಸ್ವಿಯ ಇದೇ ಅವಧಿಗೆ ಹೋಲಿಸಿದರೆ ಟ್ವಿಟರ್ನ ವೆಬ್ ಟ್ರಾಫಿಕ್ ಶೇಕಡಾ 11 ರಷ್ಟು ಕಡಿಮೆಯಾಗಿದೆ ಎಂದು ಕಂಪನಿ ಹೇಳಿದೆ.
ಥ್ರೆಡ್ಸ್ ಆಯಪ್ OpenAI ನ ಜನರೇಟಿವ್ ಚಾಟ್‌ಬಾಟ್ ChatGPT ಗಿಂತಲೂ ವೇಗವಾಗಿ 100 ಮಿಲಿಯನ್ ಮೈಲಿಗಲ್ಲನ್ನು ತಲುಪಿದೆ. ಚಾಟ್ಜಿಪಿಟಿ ಇದು ಎರಡು ತಿಂಗಳಲ್ಲಿ 100 ಮಿಲಿಯನ್ ಮಾಸಿಕ ಬಳಕೆದಾರರನ್ನು ಪಡೆದುಕೊಂಡಿತ್ತು. ಮೆಟಾದ ಥ್ರೆಡ್ಸ್‌ಗೆ ಈಗಾಗಲೇ ಇರುವ ಇನ್ಸ್ಟಾಗ್ರಾಂ ಖಾತೆಯ ಮೂಲಕ ಸೈನ್ ಅಪ್ ಮಾಡಬಹುದಾಗಿರುವುದರಿಂದ ಅದು ತೀವ್ರವಾಗಿ ಬೆಳವಣಿಗೆ ಹೊಂದಲು ಕಾರಣವಾಗಿದೆ.
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಆಗಿರುವ ಎಲೋನ್ ಮಸ್ಕ್, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಮಾರು 13 ಬಿಲಿಯನ್ ಡಾಲರ್ ಸಾಲ ಒಳಗೊಂಡಿರುವ 44 ಬಿಲಿಯನ್ ಡಾಲರ್ ಸ್ವಾಧೀನ ಪ್ರಕ್ರಿಯೆಯ ಮೂಲಕ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಅನ್ನು ಖರೀದಿಸಿದ್ದರು. ಬಹುತೇಕ ಎಲ್ಲಾ ಜಾಹೀರಾತುದಾರರು ಟ್ವಿಟರ್ನಲ್ಲಿ ಜಾಹೀರಾತು ನೀಡುವುದನ್ನು ಪುನರಾರಂಭಿಸಿದ್ದಾರೆ ಎಂದು ಏಪ್ರಿಲ್‌ನಲ್ಲಿ ಮಸ್ಕ್ ಹೇಳಿದ್ದರು.