ವಿದ್ಯುತ್ ದರ ಪ್ರತಿ ಯೂನಿಟ್‌ಗೆ 70 ಪೈಸೆ ಏಪ್ರಿಲ್​ನಿಂದಲೇ ಹೆಚ್ಚಳ: ಕೆಇಆರ್​ಸಿ ಸ್ಪಷ್ಟನೆ

ಬೆಂಗಳೂರು: ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ 70 ಪೈಸೆ ಏರಿಕೆ ಮಾಡಿರುವ ಹಿನ್ನೆಲೆ ಬೆಸ್ಕಾಂ ಜೂನ್ ತಿಂಗಳಿನಲ್ಲಿ ವಿದ್ಯುತ್ ಬಳಕೆಯ ಬಿಲ್‌ನಲ್ಲಿ ಪರಿಷ್ಕತ ಶುಲ್ಕವನ್ನು ನಮೂದಿಸಲಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆ.ಇ.ಆರ್.ಸಿ) ಸ್ಪಷ್ಟಪಡಿಸಿದೆ.

ಗ್ರಾಹಕರು ಬಳಸುವ ಮೊದಲ 100 ಯೂನಿಟ್ ವಿದ್ಯುತ್‌ಗೆ ಪ್ರತಿ ಯೂನಿಟ್ ದರ 4.75 ರೂ. 100 ಯೂನಿಟ್‌ ಮೀರಿದ್ದಲ್ಲಿ ಬಳಸಿದ ಅಷ್ಟೂ ಯೂನಿಟ್‌ಗೆ 2ನೇ ಶೇಣಿ ದರ ಪ್ರತಿ ಯೂನಿಟ್‌ಗೆ 7 ರೂ. ನಂತೆ ಅನ್ವಯವಾಗಲಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತಿಳಿಸಿದೆ.

ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್​ನಿಂದ ಪೂರ್ವನ್ವಯವಾಗುವುದರಿಂದ ಬಿಲ್‌ನಲ್ಲಿ ಆ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆಯೇ ಆದೇಶದ ಪ್ರಕಾರ 2 ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ.

ಗ್ರಾಹಕರು ಬಳಸುವ ಮೊದಲ 100 ಯೂನಿಟ್ ವಿದ್ಯುತ್‌ಗೆ ಪ್ರತಿ ಯೂನಿಟ್ ದರ 4.75 ರೂ ವಿಧಿಸಲಾಗಿದೆ. 100 ಯೂನಿಟ್‌ ಮೀರಿದ್ದಲ್ಲಿ ಬಳಸಿದ ಅಷ್ಟೂ ಯೂನಿಟ್‌ಗೆ 2ನೇ ಶೇಣಿ ದರ ಪ್ರತಿ ಯೂನಿಟ್‌ಗೆ 7 ರೂ. ನಂತೆ ಅನ್ವಯವಾಗಲಿದೆ ಎಂದು ತಿಳಿಸಿದೆ.

ದರ ಪರಿಷ್ಕರಣೆ ಆದೇಶದಲ್ಲಿ ನಿಗದಿತ ಶುಲ್ಕದಲ್ಲಿ 1 ರಿಂದ 50 ಕಿಲೋ ವ್ಯಾಟ್ ವಿದ್ಯುತ್ ಲೋಡ್‌ಗೆ 110 ರೂ ಹಾಗೂ 50 ಕಿಲೋ ವ್ಯಾಟ್‌ ಗಿಂತಲೂ ಮೇಲ್ಪಟ್ಟ ವಿದ್ಯುತ್‌ ಲೋಡ್‌ಗೆ 210 ರೂ ವಿದ್ಯುತ್ ದರ ನಿಗದಿಪಡಿಸಲಾಗಿದೆ ಎಂದು ಹೇಳಿದೆ.

ಕೆ ಇ ಆರ್‌ ಸಿ ದರ ಪರಿಷ್ಕರಣೆ ಹೇಗೆ? ಕೆಇಆರ್‌ಸಿ ದರ ನಿಯಂತ್ರಣ ಅಧಿಸೂಚನೆ 2006 ರ ಪ್ರಕಾರ ಎಲ್ಲಾ ಎಸ್ಕಾಂಗಳೂ ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಕೆಇಆರ್ ಸಿ ಮುಂದೆ ಅರ್ಜಿ ಸಲ್ಲಿಸಬೇಕು. ಅರ್ಜಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಎಸ್ಕಾಂಗಳ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ದರ ಪರಿಷ್ಕರಣೆ ಆದೇಶವನ್ನು ನೀಡುತ್ತದೆ. ಇದು ಕೆ ಇ ಆರ್ ಸಿಯ ಸಾಮಾನ್ಯ ನಡವಳಿಯಾಗಿದ್ದು, ಎಸ್ಕಾಂಗಳು ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸದಿದ್ದ ಪಕ್ಷದಲ್ಲಿ ಕೆ ಇ ಆರ್‌ ಸಿ ಸ್ವಯಂಪ್ರೇರಿತವಾಗಿ ವಿದ್ಯುತ್‌ ದರ ಏರಿಕೆ ಆದೇಶ ನೀಡಲು ಕಾನೂನಿನಲ್ಲಿ ಅವಕಾಶವಿದೆ.

ಏಪ್ರಿಲ್ ತಿಂಗಳ ಹೆಚ್ಚಳ ಜೂನ್ ತಿಂಗಳಿನಲ್ಲಿ ವಸೂಲಿ: ಈ ಕುರಿತು ಮಾಹಿತಿ ನೀಡಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ 2022ರ ನವೆಂಬರ್‌ನಲ್ಲಿ ವಿದ್ಯುತ್‌ ದರ ಪರಿಷ್ಕರಣೆಗೆ ನೀಡಿದ್ದ ಮನವಿಯನ್ನು ಪುರಸ್ಕರಿಸಿರುವ ಕೆ ಇ ಆರ್ ಸಿ ಆದೇಶದಂತೆ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್‌ಗೆ 70 ಪೈಸೆಯಷ್ಟು ಹೆಚ್ಚಳ ಮಾಡಿದ ಮೊತ್ತವನ್ನು ಜೂನ್ ತಿಂಗಳಿನಲ್ಲಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

2 ಶ್ರೇಣಿಯಲ್ಲಿ ದರ ನಿಗದಿ: ಮೊದಲು ಮೂರು ಶ್ರೇಣಿ ದರಗಳಲ್ಲಿ ಸಂಗ್ರಹಿಸಲಾಗುತ್ತಿತ್ತು. ಇದೀಗ ಎರಡು ಶ್ರೇಣಿಯಲ್ಲಿ ಸಂಗ್ರಹಿಸಲು ಕೆಇಆರ್‌ಸಿ ಮೇ 12 ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.