ಕಾರ್ಕಳದ ಬೆಳ್ಮಣ್ ಸೇರಿದಂತೆ ಹಲವು ಕಡೆ ವಿದ್ಯುತ್ ನಿರಂತರ ಕಣ್ಣಾಮುಚ್ಚಾಲೆ: ಮೆಸ್ಕಾಂ ನ ಕಳಪೆ ವಿದ್ಯುತ್ ಸೇವೆ ವಿರುದ್ಧ ಹೋರಾಟದ ಎಚ್ಚರಿಕೆ!

ಕಾರ್ಕಳ: ತಾಲೂಕಿನಲ್ಲಿ ಬೆಳ್ಮಣ್, ನಂದಳಿಕೆ,ಸೂಡ,ಕೆದಿಂಜೆ, ಮುಲ್ಲಡ್ಕ, ಸಚ್ಚರಿಪೇಟೆ, ಬೋಳ, ನಿಟ್ಟೆ ಮೊದಲಾದ ಪ್ರದೇಶದಲ್ಲಿ ದಿನಕ್ಕೆ 20 ರಿಂದ 30 ಸಲ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದ್ದು ಮೆಸ್ಕಾಂ ತನ್ನ ಕಳಪೆ ಸೇವೆಗೆ ಮತ್ತೆ ಸುದ್ದಿಯಲ್ಲಿದೆ. ಈ ಭಾಗದಲ್ಲಿ ಕಳೆದ ಸುಮಾರು ಹತ್ತು ದಿನಗಳಿಂದ ಹೀಗೆ ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಸ್ಥಳೀಯ ಮೆಸ್ಕಾಂ ಕೆಲಸಗಾರರು, ಕಾರ್ಕಳದ ಮೆಸ್ಕಾಂ ಅಧಿಕಾರಿಗಳ ಕರ್ತವ್ಯ, ಸೇವೆ ಎಷ್ಟೊಂದು ಕಳಪೆ ಮಟ್ಟದಲ್ಲಿದೆ ಎನ್ನುವುದನ್ನು ಈ ವ್ಯಾಪ್ತಿಯಲ್ಲಿನ ವಿದ್ಯುತ್ ನಿರ್ವಹಣೆ ನೋಡಿಯೇ ತಿಳಿಯಬೇಕು.

ಮಳೆ ಹನಿ ಬಿದ್ದರೆ ಪಡೆದುಹೋಗುತ್ತೆ ಡಿಸ್ಕ್ ಪ್ಲೇಟ್:

ಮಳೆ ಹನಿ ಬಿದ್ದರೂ ಸಾಕು, ವಿದ್ಯುತ್ ಕಂಬದಲ್ಲಿರುವ ಡಿಸ್ಕ್ ಪ್ಲೇಟ್, ಇನ್ಫುಲೆಟರ್ ಒಡೆದು ಹೋಗುತ್ತಿದೆ. ಇದು  ಮೆಸ್ಕಾಂ  ಅಳವಡಿಸಿರುವ ವಿದ್ಯುತ್ ಪರಿಕರಗಳು ಎಷ್ಟೊಂದು ಕಳಪೆ ಮಟ್ಟದ್ದು ಎನ್ನುವುದನ್ನು ತೋರಿಸುತ್ತಿದೆ. ಈ ಸಮಸ್ಯೆ ಕಳೆದ  15 ವರ್ಷಗಳಿಂದಲೂ ಇದೆ. 40 ವರ್ಷಗಳಿಂದ ಇರುವ ವಿದ್ಯುತ್ ತಂತಿಗಳನ್ನು ಇಲ್ಲಿ ಬದಲಾಯಿಸಿದ್ದೇ ಇಲ್ಲ. ವಿದ್ಯುತ್ ಕಂಬ, ತಂತಿಗಳ ಮೇಲೆ ಬೀಳುವ ಮರದ ಗೆಲ್ಲುಗಳನ್ನು ಕತ್ತರಿಸುವ ವ್ಯವಸ್ಥೆಗಳು ಇದ್ದರೂ ಸಿಬಂದಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳ, ವ್ಯವಸ್ಥಾಪಕರ ಅಸಡ್ಡೆ, ವೈಫಲ್ಯದ ಪರಿಣಾಮವಿದು!

ವಿದ್ಯುತ್ ಕಳಪೆ ಸೇವೆ ಹೀಗೇ ಮುಂದುವರಿದರೆ ದೊಡ್ಡ ಮಟ್ಟದ ಹೋರಾಟ: ಕ್ಸೇವಿಯರ್ ಡಿಮೆಲ್ಲೋ

“ಅಧಿಕಾರಿಗಳು ಜನರಿಂದ ಲಂಚ ಹೀರುತ್ತಾರೆ ಬಿಟ್ಟರೆ ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ. ವಿದ್ಯುತ್ ಕಳಪೆ ಸೇವೆಯಿಂದ ಕೃಷಿಕರಿಂದ ಹಿಡಿದು ಸಾಮಾನ್ಯ ಜನರು ನಲುಗಿಹೋಗಿದ್ದಾರೆ.ವಿರೋಧಪಕ್ಷ ಬಾಯಿಗೆ ಬೀಗ ಹಾಕಿ ಕೂತಿದ್ದರೆ, ಆಡಳಿತ ಪಕ್ಷ, ಕಾಲಿಗೆ ಕೋಳ ಬಿಗಿದು ಕೂತಿವೆ. ಸ್ಥಳೀಯ ಪತ್ರಿಕಾ ಮಾಧ್ಯಮಗಳು ಈ ಕುರಿತು ಗಮನ ಹರಿಸುತ್ತಿಲ್ಲ. ಸಾಮಾನ್ಯ ಜನರ ನೋವು, ಲಂಚ ತಿನ್ನುವ ಅಧಿಕಾರಿ, ಜನಪ್ರತಿನಿಧಿಗಳಿಗೆ ಗೊತ್ತಾಗುತ್ತಿಲ್ಲ”ಎಂದು ಸಾಮಾಜಿಕ ಹೋರಾಟಗಾರ ಕ್ಸೇವಿಯರ್ ಡಿಮೆಲ್ಲೋ  ಹೇಳಿದ್ದಾರೆ.

ಆದಷ್ಟು ಶೀಘ್ರವೇ ತಮ್ಮ ವೃತ್ತಿ ಅವಧಿ ಮುಗಿದರೂ ನಿವೃತ್ತಿಯಾಗದೇ ಅತ್ತ ಕೆಲಸವೂ ಮಾಡದೇ ಇರುವ ಸಿಬಂಧಿಗಳನ್ನು ಕೂಡಲೇ ಬದಲಾಯಿಸಬೇಕು,ಹೊಸ ಸಿಬಂಧಿಗಳನ್ನು ಕರ್ತವ್ಯಕ್ಕೆ ಹಾಕಬೇಕು. ಈ ಭಾಗದಲ್ಲಿ ಸಮರ್ಪಕ ವಿದ್ಯುತ್ ಸೇವೆ ನೀಡಬೇಕು, ಇಲ್ಲದಿದ್ದಲ್ಲಿ ಸ್ಥಳೀಯ ಜನರನ್ನು ಒಗ್ಗೂಡಿಸಿಕೊಂಡು ದೊಡ್ಡ ಮಟ್ಟಿಗಿನ ಹೋರಾಟ ಮಾಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರ, ತಾ.ಪಂ.ಸದಸ್ಯರಾದ ಕ್ಸೇವಿಯರ್ ಡಿಮೆಲ್ಲೋ ಮೆಸ್ಕಾಂ ವ್ಯವಸ್ಥಾಪಕರು, ಕಾರ್ಕಳ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಉಡುಪಿ ಜಿಲ್ಲಾ ಮುಖ್ಯ ಕಾರ್ಯಪಾಲಕ ಅಭಿಯಂತರರಿಗೆ ಎಚ್ಚರಿಕೆ ನೀಡಿದ್ದಾರೆ.