ಉಡುಪಿ: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು. ಎಪ್ರಿಲ್ 18 ರಂದು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವುದನ್ನು ಖಾತರಿ ಪಡಿಸುವ ಸಲುವಾಗಿ ಆಯ್ದ ಪರವಾನಿಗೆ ಹೊಂದಿರುವಂತಹ ಪರವಾನಿಗೆ ದಾರರನ್ನು ಪೂರ್ವಭಾವಿ ಪರಿಶೀಲನೆ ಮಾಡಿ, ಚುನಾವಣೆಯ ಅವಧಿಯಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಆಯುಧ, ಶಸ್ತ್ರಾಸ್ತ್ರ, ಮಾರಕಾಯುಧಗಳು, ಮದ್ದು ಗುಂಡುಗಳನ್ನು ಹೊಂದುವುದು, ಸಾಗಿಸುವುದು ಮತ್ತು ಬಳಸುವುದರ ಮೇಲೆ ನಿರ್ಭಂಧಗಳನ್ನು ವಿಧಿಸುವುದು ಅತೀ ಅವಶ್ಯಕವೆಂದು ಮನಗಂಡು ಜಿಲ್ಲಾಧಿಕಾರಿ ಹೆಪ್ಸಿಪಾ ರಾಣಿ ಕೊರ್ಲಪಾಟಿ ಚುನಾವಣಾ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಬಳಕೆ ನಿಷೇದಿಸಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಈ ಆದೇಶ ಹೊರಡಿಸಿದ ದಿನದಿಂದ ಲೋಕಸಭಾ ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗಿನ ಅವಧಿಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳು, ಆಯುಧಗಳು ಮತ್ತು ಮದ್ದು ಗುಂಡುಗಳೊಂದಿಗೆ ಸಂಚರಿಸುವುದನ್ನು ಮತ್ತು ಅವುಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆತ್ಮ ರಕ್ಷಣೆಗಾಗಿ ಮತ್ತು ಕೃಷಿ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಅಧಿಕೃತ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು (ಎಸ್.ಬಿ.ಬಿ.ಎಲ್/ ಡಿ.ಬಿ.ಬಿ.ಎಲ್/ ಎಸ್.ಬಿ.ಎಂ.ಎಲ್/ ಡಿ.ಬಿ.ಎಂ.ಎಲ್/ ಎನ್.ಪಿ.ಬಿ./ ರೈಫಲ್) ಶಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ವಿವಿದ ಶಸ್ತ್ರಾಸ್ತ್ರಗಳನ್ನು ತಮ್ಮ ವಿಳಾಸ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತವಾಗಿ ಪರವಾನಿಗೆ ಹೊಂದಿರುವ ಡೀಲರ್ ಶಾಪ್‍ಗಳಲ್ಲಿ ಮಾತ್ರ ಕಡ್ಡಾಯವಾಗಿ ವಿಳಂಬ ಮಾಡದೆ ಮಾರ್ಚ್ 18 ರ ಒಳಗೆ ಠೇವಣಿ ಮಾಡಿ ರಶೀದಿ ಪಡೆಯಬೇಕು ಚುನಾವಣಾ ಫಲಿತಾಂಶ ಘೋಷಣೆಯಾದ ದಿನದಿಂದ ಒಂದು ವಾರದ ನಂತರ ಶಸ್ತ್ರಾಸ್ತ್ರ ಠೇವಣಿ ಪಡೆದ ಠಾಣಾಧಿಕಾರಿಗಳಿಂದ ಅಥವಾ ಡೀಲರ್‍ಗಳಿಂದ ಪರವಾನಿಗೆದಾರರು ಶಸ್ತ್ರಾಸ್ತ್ರಗಳನ್ನು ಮರುಪಡೆದು ಕೊಳ್ಳಬಹುದು. ಈ ನಿಷೇಧ ಆದೇಶವು ಸರಕಾರಿ ಕರ್ತವ್ಯಕ್ಕೆ ಹಾಗೂ ಬ್ಯಾಂಕ್ ಸೆಕ್ಯೂರಿಟಿ ಸಂಸ್ಥೆಗಳ ಭದ್ರತೆ ಹಾಗೂ ಸಂರಕ್ಷತಾ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ವೇಳೆ ಶಸ್ತ್ರಾಸ್ತ್ರ ಆಯುಧ ಬಳಸುವುದಕ್ಕೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಆದೇಶಕ್ಕೆ ವ್ಯತಿರಿಕ್ತವಾಗಿ ಹಾಗೂ ಯಾವುದೇ ರೀತಿಯ ಕಾನೂನು ಬಾಹಿರವಾಗಿ ಪರವಾನಿಗೆ ರಹಿತ ಶಸ್ತ್ರಾಸ್ತ್ರ /ಆಯುಧ ಇತ್ಯಾದಿಗಳ ಸಂಗ್ರಹಣೆ, ಬಳಕೆ, ಸಾಗಾಟ ಮಾಡುವುತ್ತಿರುವ ಸುಳಿವು ದೊರಕಿದ್ದಲ್ಲಿ ಈ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.