2024 – ಲೋಕಸಭಾ ಚುನಾವಣೆಗೆ ದಿನ ನಿಗದಿ: ಏ.19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ ಚುನಾವಣೆ; ಜೂನ್ 4 ರಂದು ಮತಎಣಿಕೆ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ದಿನಾಂಕಗಳನ್ನು ಘೋಷಿಸಿದರು.

ಲೋಕಸಭೆ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದೆ. 1 ಹಂತ ಏ.19 ರಂದು, 2 ನೇ ಹಂತ ಏ.26 ರಂದು, 3ನೇ ಹಂತ ಮೇ 7 ರಂದು (ಕರ್ನಾಟಕ), 4ನೇ ಹಂತ ಮೇ 13ರಂದು, 5 ನೇ ಹಂತವು ಮೇ 20 ರಂದು, 6ನೇ ಹಂತ ಮೇ 25ರಂದು, 7ನೇ ಹಂತ ಜೂನ್ 1 ರಂದು ನಡೆಯಲಿದೆ.

ಆಂಧ್ರ ಪ್ರದೇಶ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು 13 ಮೇ, 2024 ರಂದು ನಡೆಯಲಿದೆ. ಏಪ್ರಿಲ್ 19 ರಂದು ಅರುಣಾಚಲ ಪ್ರದೇಶ, ಸಿಕ್ಕಿಂ ವಿಧಾನಸಭೆ ಚುನಾವಣೆ ನಡೆಯಲಿದೆ. ಒಡಿಶಾ ವಿಧಾನಸಭೆ ಚುನಾವಣೆಗಳು ಎರಡು ಹಂತದಲ್ಲಿ ನಡೆಯಲಿದ್ದು, ಮೇ.13 ಮತ್ತು ಮೇ.25 ರಂದು ನಡೆಯಲಿದೆ.

ಮತ ಎಣಿಕೆಯು ಎಣಿಕೆಯು 4 ಜೂನ್, 2024 ರಂದು ನಡೆಯಲಿದೆ.

ಈ ಚುನಾವಣೆಯಲ್ಲಿ ನೋಂದಾಯಿತ ಮತದಾರರ ಸಂಖ್ಯೆ 97 ಕೋಟಿ, 55 ಲಕ್ಷ ಇವಿಎಂ ಯಂತ್ರಗಳಿಂದ ಮತಗಳನ್ನು ಚಲಾಯಿಸಲಾಗುತ್ತದೆ ಹಾಗೂ 10.5 ಲಕ್ಷ ಪೋಲಿಂಗ್ ಬೂತ್ ಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತದೆ. 1.5 ಕೋಟಿ ರಕ್ಷಣಾ ಸಿಬ್ಬಂದಿಗಳು ಹಾಗೂ ಮತದಾನ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಅವರು ತಿಳಿಸಿದರು.

80 ವರ್ಷ ಮೇಲ್ಪಟ್ಟ ನಾಗರಿಕರು, ಅಂಗವಿಕಲರು ಫಾರ್ಮ್ 12ಡಿ ಬಳಸಿ ಮನೆಯಿಂದಲೇ ಮತ ಚಲಾಯಿಸಬಹುದು ಎಂದು ಸಿಇಸಿ ರಾಜೀವ್ ಕುಮಾರ್ ತಿಳಿಸಿದ್ದಾರೆ. ಆದಾಗ್ಯೂ, ಅವರು ಮತಗಟ್ಟೆಗೆ ಭೇಟಿ ನೀಡಲು ಬಯಸಿದರೆ, ರ‍್ಯಾಂಪ್‌ಗಳು ಮತ್ತು ಗಾಲಿಕುರ್ಚಿಗಳು ಲಭ್ಯವಿದೆ.

1.8 ಕೋಟಿ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 82 ಲಕ್ಷಕ್ಕೂ ಅಧಿಕ ಮತದಾರರು 80 ವರ್ಷ ಮೇಲ್ಪಟ್ಟವರಾಗಿದ್ದು, ಅವರಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಶತಾಯುಷಿಗಳಾಗಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವಲ್ಲಿ ಸವಾಲುಗಳು ನಾಲ್ಕುತರದ್ದಾಗಿದೆ. ಸ್ನಾಯುಬಲ, ಹಣಬಲ, ತಪ್ಪು ಮಾಹಿತಿ ಮತ್ತು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ. ಆದರೆ ಈ ಎಲ್ಲಾ ಅಡ್ಡಿಪಡಿಸುವ ಸವಾಲುಗಳನ್ನು ಎದುರಿಸಲು ECI ಬದ್ದವಾಗಿದ್ದು ಕ್ರಮಗಳನ್ನು ಕೈಗೊಂಡಿದೆ ಎಂದರು.

ಚುನಾವಣೆಗಳು ಪರಿಸರ ಸ್ನೇಹಿಯಾಗಿರಲಿದ್ದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಲಾಗುವುದು ಎಂದು ಅವರು ತಿಳಿಸಿದರು.

ಎಲ್ಲಾ ಪಾಲುದಾರರಿಗಾಗಿ 27 ಅಪ್ಲಿಕೇಶನ್‌ಗಳು ಮತ್ತು ಪೋರ್ಟಲ್‌ಗಳು ಲಭ್ಯವಿದೆ. cVigil ಮಾದರಿ ನೀತಿ ಸಂಹಿತೆ ಉಲ್ಲಂಘನೆ ವರದಿ ಮಾಡಲು ನಾಗರಿಕರಿಗೆ ಅಧಿಕಾರ ನೀಡುತ್ತದೆ. KYC ಅಪ್ಲಿಕೇಶನ್ ತಿಳುವಳಿಕೆಯುಳ್ಳ ಮತದಾನವನ್ನು ಸುಗಮಗೊಳಿಸುತ್ತದೆ.

ಚುನಾವಣೆಯಲ್ಲಿ ರಕ್ತಪಾತ, ಹಿಂಸಾಚಾರಕ್ಕೆ ಜಾಗವಿಲ್ಲ. ಹಿಂಸಾಚಾರದ ಮಾಹಿತಿ ಎಲ್ಲಿಂದ ಬಂದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ನಕಲಿ ಸುದ್ದಿಗಳನ್ನು ಹರಿಯಬಿಡುವವರ ಮೇಲೆ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಕಠಿಣಕ್ರಮ ತೆಗೆದುಕೊಳ್ಳಲಾಗುವುದು, ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು 2,100 ವೀಕ್ಷಕರನ್ನು ನಿಯೋಜಿಸಲಾಗುವುದು ಎಂದರು.