ಉಡುಪಿ:ಹಿಂದೂ ಐಕ್ಯತಾ ಮೆರವಣಿಗೆ

ಉಡುಪಿ:ಹಿಂದೂ ಯುವತಿಯರನ್ನು ಲವ್‌ ಜಿಹಾದ್‌ ಮೂಲಕ ಪಾಪದ ಕೂಪಕ್ಕೆ ತಳ್ಳುವ ವ್ಯವಸ್ಥೆ
ನಡೆಯುತ್ತಿದೆ. ಹಿಂದೂಗಳ ಭಾವನೆಯನ್ನು ಕೆರಳಿಸುವ ಮೂಲಕ ಗಲಾಟೆಗೆ ಆಸ್ಪದ
ನೀಡಲಾಗುತ್ತಿದೆ. ಇದನ್ನು ನಾವು ಮೆಟ್ಟಿ ನಿಲ್ಲಬೇಕಾದರೆ ಹಿಂದೂ ರಾಷ್ಟ್ರದ ನಿರ್ಮಾಣ
ಆಗಬೇಕು ಎಂದು ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಪರಾತ್ಪರ ಗುರು ಜಯಂತ ಆಠವಲೆ ಅವರ ಜಯಂತಿ ಪ್ರಯುಕ್ತ ಹಿಂದೂ ಜನಜಾಗೃತಿ ಸಮಿತಿ
ವತಿಯಿಂದ ಅಜ್ಜರಕಾಡಿನ ಭುಜಂಗ್‌ ಪಾರ್ಕ್‌ ಎದುರು ಸೋಮವಾರ ನಡೆದ ಹಿಂದೂ ಐಕ್ಯತಾ
ಮೆರವಣಿಗೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಅನ್ಯ ಧರ್ಮದವರಿಗೆ ಸಾಕಷ್ಟು ಅವಕಾಶಗಳನ್ನು ಕೊಟ್ಟಿದ್ದೇವೆ. ಆದರೆ ಅವರು ನಾವು
ಕೊಟ್ಟ ಅವಕಾಶಗಳನ್ನೇ ಸದ್ಭಳಕೆ ಮಾಡಿಕೊಂಡು ನಮ್ಮ ಮೇಲೆ ಪ್ರಯೋಗ ಮಾಡುತ್ತಿದ್ದಾರೆ.
ಹಿಂದೂಗಳು ಈವರೆಗೆ ಯಾವುದೇ ಒಂದು ಮಸೀದಿ, ಚರ್ಚ್‌, ಕುರಾನ್‌, ಬೈಬಲ್‌ ಸುಟ್ಟು
ಹಾಕಿದ ಇತಿಹಾಸವಿಲ್ಲ. ಹಿಂದೂಗಳು ಶಾಂತಿ ಪ್ರಿಯರು. ಇದನ್ನು ಇತರ ಧರ್ಮದವರು
ಗೌರವಿಸಬೇಕು ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರ ವಿಜಯಕುಮಾರ್‌ ಮಾತನಾಡಿದರು. ಡಾ. ಶ್ರೀಕಲಾ ಜೋಶಿ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮಕ್ಕೂ ಮೊದಲು ಸರ್ವಿಸ್‌ ಬಸ್‌
ನಿಲ್ದಾಣದಿಂದ ಅಜ್ಜರಕಾಡಿನ ಭುಜಂಗ್‌ ಪಾರ್ಕ್‌ ವರೆಗೆ ಹಿಂದೂ ಐಕ್ಯತಾ ಮೆರವಣಿಗೆ
ನಡೆಯಿತು.