ಈದ್ ಉಲ್ ಫಿತ್ರ್ ವಿಶ್ವಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಹಬ್ಬವು ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇದು ಉಪವಾಸ, ಪ್ರಾರ್ಥನೆ ಮತ್ತು ಆತ್ಮಾವಲೋಕನದ ಅವಧಿಯಾಗಿದೆ. ಈದ್ ಉಲ್ ಫಿತರ್ ಅನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತಿದೆ.
ಮುಸ್ಲಿಂ ಸಂಪ್ರದಾಯದ ಪ್ರಕಾರ ಈದ್ ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು. ಕೆಲವು ಸಂಪ್ರದಾಯಗಳ ಪ್ರಕಾರ, ಮುಹಮ್ಮದ್ ಅವರು ಮೆಕ್ಕಾದಿಂದ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು.
ಸಾಂಪ್ರದಾಯಿಕವಾಗಿ, ಈದ್ ಉಲ್-ಫಿತರ್ ಸೂರ್ಯಾಸ್ತದ ಬಳಿಕ ಚಂದ್ರನ ಮೊದಲ ನೋಟದಿಂದ ಪ್ರಾರಂಭವಾಗುತ್ತದೆ. ಒಂದು ವೇಳೆ ಅಂದು ಚಂದ್ರ ದರ್ಶನವಾಗದಿದ್ದಲ್ಲಿ, ಈದ್ ಅನ್ನು ಮರುದಿನ ಆಚರಿಸಲಾಗುತ್ತದೆ. ದೇಶವನ್ನು ಅವಲಂಬಿಸಿ ಒಂದರಿಂದ ಮೂರು ದಿನಗಳವರೆಗೆ ಈದ್ ಆಚರಿಸಲಾಗುತ್ತದೆ.
ಈದ್ ದಿನದಂದು ಉಪವಾಸ ಮಾಡುವುದನ್ನು ನಿಷೇಧಿಸಲಾಗಿದೆ ಮತ್ತು ಈ ದಿನದಂದು ನಿರ್ದಿಷ್ಟ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ದಾನದ ಕಡ್ಡಾಯ ಭಾಗವಾಗಿ, ಬಡವರಿಗೆ ಮತ್ತು ನಿರ್ಗತಿಕರಿಗೆ (ಝಕಾತ್-ಉಲ್-ಫಿತರ್) ಹಣ ಅಥವಾ ಉಡುಗೊರೆಗಳನ್ನು ದಾನ ಮಾಡಲಾಗುತ್ತದೆ. ಮೈದಾನ, ಸಮುದಾಯ ಕೇಂದ್ರ ಅಥವಾ ಮಸೀದಿಯಂತಹ ತೆರೆದ ಪ್ರದೇಶದಲ್ಲಿ ಈದ್ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ತದನಂತರ ಎಲ್ಲರೂ ಸೇರಿ ಈದ್ ಆಚರಣೆಗಳನ್ನು ಕೈಗೊಳ್ಳುತ್ತಾರೆ.