ಶಿಕ್ಷಣ ಸಂಸ್ಥೆಗಳು ಸಮಾಜ ಕಟ್ಟುವ ದೇಗುಲವಿದ್ದಂತೆ: ಪ್ರೊ.ಎಂ. ಬಾಲಕೃಷ್ಣ ಶೆಟ್ಟಿ

ಕುಂದಾಪುರ: ಗುರು ಪರಂಪರೆಯಲ್ಲಿ ಗುರುವು ಒಳ್ಳೆಯ ಶಿಷ್ಯನನ್ನು ಪಡೆದಾಗ ಮಾತ್ರ ಶಿಕ್ಷಕ ಧನ್ಯನಾಗುತ್ತಾನೆ. ಸಮಾಜದಲ್ಲಿ ಗುರುವಿಗೆ ಮನ್ನಣೆಯಿದ್ದು, ಶಿಕ್ಷಕರು ತಾಯಿಗಿಂತ ಶ್ರೇಷ್ಠರು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಸಮಾಜ ಕಟ್ಟುವ ದೇಗುಲವಿದ್ದಂತೆ ಎಂದು ಮಂಗಳೂರಿನ ರಾಮಕೃಷ್ಣ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಹೇಳಿದರು.

ಅವರು ಸೆ. 5 ರಂದು ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜ್ ಮತ್ತು ಸ್ಕೂಲ್‌ನ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ. ಸರ್ವಪಳ್ಳಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಂಗಳೂರಿನ ರಾಮಕೃಷ್ಣ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಗುರುವಂದನೆ ಸಲ್ಲಿಸಲಾಯಿತು. ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಶ್ರಮಿಸಿದ ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು.

ಸುಜ್ಞಾನ್ ಎಜುಕೇಶನಲ್ ಟ್ರಸ್ಟಿನ ಅಧ್ಯಕ್ಷ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಸಮ್ಮಾನಿತರ ಪಟ್ಟಿ ವಾಚಿಸಿದರು. ಪ್ರಕಾಶ್ ಆಚಾರ್ಯ ನಿರೂಪಿಸಿ, ವಂದಿಸಿದರು.