‘ಶಿಕ್ಷಣವೇ ಮುಂದಿನ ಟ್ರೆಂಡ್ ಆಗಬೇಕು, ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಬಗ್ಗೆ ನನ್ನ ಹೃದಯ ಮಿಡಿಯುತ್ತದೆ’ ನೀಟ್ ಪ್ರತಿಭಟನೆಗೆ ಬೆಂಬಲಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಪೋಸ್ಟ್

ದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ತಮ್ಮ ಪೋಸ್ಟ್‌ನಲ್ಲಿ, “ಇದು ಆರಂಭದಲ್ಲಿ ಅತ್ಯಂತ ಶಾಂತಿಯುತ ಪ್ರತಿಭಟನೆಯಾಗಿತ್ತು. ಆದರೆ ಅದು ಹಿಂಸಾತ್ಮಕ ತಿರುವು ಪಡೆದುಕೊಂಡಿರುವುದು ನಿಜಕ್ಕೂ ನೋವುಂಟು ಮಾಡಿದೆ. ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಬಗ್ಗೆ ನನ್ನ ಹೃದಯ ಮಿಡಿಯುತ್ತದೆ” ಎಂದು ಹೇಳಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆಯನ್ನು ಗಂಭೀರ ಸಮಸ್ಯೆ ಎಂದು ಬಣ್ಣಿಸಿರುವ ಅವರು, “ಉತ್ತಮ, ನ್ಯಾಯಸಮ್ಮತ ಮತ್ತು ಪಾರದರ್ಶಕ ಶಿಕ್ಷಣ ವ್ಯವಸ್ಥೆಗಾಗಿ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಧ್ವನಿ ಎತ್ತುತ್ತಿರುವುದು ಶ್ಲಾಘನೀಯ. ಅವರ ಸಮರ್ಪಣೆ, ಪ್ರಾಮಾಣಿಕತೆ ಮತ್ತು ದೃಢಸಂಕಲ್ಪ ಹೊಸ ಭಾರತದ ನಿರ್ಮಾಣಕ್ಕೆ ಸ್ಫೂರ್ತಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹೋರಾಟವನ್ನು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ ಸಲ್ಮಾನ್, “ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಸರಿಯಾದದ್ದಕ್ಕಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳಿಗೆ ಅದರ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕು. ಸರ್ಕಾರವೂ ಅವರ ಸಮಸ್ಯೆಗಳನ್ನು ಆಲಿಸಿ, ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠ ಮತ್ತು ಪಾರದರ್ಶಕವಾಗಿಸಲು ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ” ಎಂದು ಹೇಳಿದ್ದಾರೆ.

ಇದೇ ವೇಳೆ, “ಶಿಕ್ಷಣವೇ ಮುಂದಿನ ಟ್ರೆಂಡ್ ಆಗಬೇಕು. ವರ್ಷದಿಂದ ವರ್ಷಕ್ಕೆ ಅದು ಇನ್ನಷ್ಟು ಗೌರವಯುತ ಮತ್ತು ಪ್ರತಿಷ್ಠಿತವಾಗಬೇಕು. ಜಗತ್ತಿನ ವಿವಿಧ ದೇಶಗಳ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಶಿಕ್ಷಣ ಪಡೆಯುವಂತೆ ಭಾರತವು ಜಾಗತಿಕ ಶಿಕ್ಷಣ ಕೇಂದ್ರವಾಗಿ ಬೆಳೆಯಲಿ” ಎಂದು ಆಶಿಸಿದ್ದಾರೆ.

ಸಲ್ಮಾನ್ ಖಾನ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸಾವಿರಾರು ಮಂದಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.