ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಿಂದಾಗಿ ಉಡುಪಿ ಜಿಲ್ಲೆಗೆ ವಿಶ್ವಮಾನ್ಯತೆ: ಯಶ್ ಪಾಲ್ ಸುವರ್ಣ

ಉಡುಪಿ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಬಹುಮುಖ್ಯವಾಗಿದ್ದು, ಇವುಗಳ ಅಭಿವೃದ್ಧಿಗೆ ವಿಶೇಷ ಗಮನವನ್ನು ನೀಡಲಾಗುವುದು. ಶಿಕ್ಷಣವು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಂದ ಉಡುಪಿ ಜಿಲ್ಲೆ ರಾಜ್ಯ, ದೇಶ ಮತ್ತು ವಿದೇಶಗಳಲ್ಲಿ ಗುರುತಿಸಿಕೊಂಡು ವಿಶ್ವಮಾನ್ಯವಾಗಿದೆ. ಈ ಎರಡೂ ಕ್ಷೇತ್ರಗಳು ಉತ್ತಮ ಗುಣಮಟ್ಟದ ಸೇವೆಯನ್ನು ನೀಡಲು ಸಾಧ್ಯವಾದಲ್ಲಿ ಮಾತ್ರ ದೇಶ ಅಭಿವೃದ್ಧಿಯಾಗಬಲ್ಲದು ಎಂದು ಹೇಳಿದರು.

ಅವರು ಉಡುಪಿ ಪುರಭವನದಲ್ಲಿ ನಡೆದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಾಡೋಜ ಡಾ ಜಿ. ಶಂಕರ್ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಕಲಿಕೆ ಮತ್ತು ಸಾಧನೆಗಳಿಂದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜು ದೇಶ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಇಂದು ಉತ್ತಮ ವೇದಿಕೆ ಸಿಗುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಶಿಕ್ಷಣದಿಂದ ಜೀವನದಲ್ಲಿ ಉತ್ತಮ ಹಂತವನ್ನು ತಲುಪಲು ಸಾಧ್ಯ. ಶಿಕ್ಷಣವು ಒಬ್ಬ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಕಾಲೇಜು ಪ್ರಾರಂಭದಿಂದ ಹಿಡಿದು ಇಂದಿನ ತನಕ ಉತ್ತಮ ಅಭಿವೃದ್ಧಿ ಹೊಂದುತ್ತಾ ಬಂದು ಇಂದು ಜಿಲ್ಲೆಯ ಪ್ರಮುಖ ಕಾಲೇಜಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ರಾಜಶೇಖರ ಹೆಬ್ಬಾರ್ ಕಾಲೇಜಿನಲ್ಲಿ ಹಮ್ಮಿಕೊಂಡ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿ ವಿದ್ಯಾರ್ಥಿನಿಯರಿಗೆ ಶುಭಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಎಸ್ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ವಿಜ್ಞಾನ ನಿಖಾಯದ ಡೀನ್ ರಾಮಚಂದ್ರ ಅಡಿಗ ಜಿ., 2022-23ನೇ ಶೈಕ್ಷಣಿಕ ವರ್ಷದ ವಾರ್ಷಿಕ ವರದಿ ಮಂಡಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ನಡೆಸಲಾದ ವಿವಿಧ ಸ್ಪರ್ಧೆ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉಪನ್ಯಾಸಕರಾದ ಜಯಲಕ್ಷ್ಮೀ, ಪ್ರೊ. ಶ್ರೀಧರ್ ಪ್ರಸಾದ್ ಕೆ., ಡಾ ರಾಮಚಂದ್ರ ಪಾಟ್ಕರ್., ಶ್ರೀಮತಿ ಶೋಭಾ ಆರ್, ಮತ್ತು ಕು. ರಮ್ಯ ವಿ. ನಿರ್ವಹಿಸಿದರು.
ಡಾ. ವಾಣಿ ಆರ್ ಬಲ್ಲಾಳ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ. ಪ್ರಸನ್ನ ವಿ ಬಿ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ವಿದ್ಯಾ ಡಿ ವಂದಿಸಿದರು.